HomeKarnataka Newsಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅವಧಿ ವಿಸ್ತರಣೆ ಕೋರಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅವಧಿ ವಿಸ್ತರಣೆ ಕೋರಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ. ಈ ಹಂತದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿಯನ್ನು ಮುಕ್ತಾಯಗೊಳಿಸಿದೆ.

ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಹಾಗೂ ಲೇಖಕಿ ಸಬೀಹಾ ಭೂಮಿಗೌಡ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿ, ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಮರ್ಪಕ ಮಾಹಿತಿ ಮತ್ತು ತರಬೇತಿ ಕೊರತೆಯಿದೆ. ಅಲ್ಲದೆ ಮತದಾರರ ನೆರವು ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸುಮಾರು 70 ಲಕ್ಷ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ವಾಡ್, ಅಗತ್ಯವಿದ್ದರೆ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದರು.

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕವೂ ಪಟ್ಟಿಯಿಂದ ಹೊರಗುಳಿದ ಮತದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರ ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಈ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ. ಇದೇ ವಿಚಾರಗಳು ಸುಪ್ರೀಂಕೋರ್ಟ್‌ನಲ್ಲಿಯೂ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಮನೆ-ಮನೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ಜೂನ್ 29ರಿಂದ ಒಟ್ಟು 59,050 ಬಿಎಲ್‌ಒಗಳು ನಮೂನೆಗಳನ್ನು ವಿತರಿಸಿದ್ದಾರೆ. ಆದರೆ ಭರ್ತಿ ಮಾಡಿದ ನಮೂನೆಗಳನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಇನ್ನೂ ಶೇ.69.51ರಷ್ಟು ಮಾತ್ರ ಪೂರ್ಣಗೊಂಡಿದೆ.

2002ರ SIR ದಾಖಲೆಗಳ ಆಧಾರದ ಮೇಲೆ ‘ಸೆಲ್ಫ್ ಮ್ಯಾಪಿಂಗ್’ ಮತ್ತು ‘ಪ್ರೊಜೆನಿ ಮ್ಯಾಪಿಂಗ್’ ಮಾಹಿತಿ ಪತ್ತೆಹಚ್ಚುವಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿರುವುದರಿಂದ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಇದುವರೆಗೆ ಸಲ್ಲಿಕೆಯಾಗಿರುವ 3.85 ಕೋಟಿ ನಮೂನೆಗಳಲ್ಲಿ, ಸುಮಾರು 1.56 ಕೋಟಿ ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ.

ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಸಿರುವ ಸುಮಾರು 17.19 ಲಕ್ಷ ನಮೂನೆದಾರರಿಗೆ (ಶೇ.3.1) ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img