ಚಿಕ್ಕಮಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ಯುವತಿಯೊಬ್ಬಳ ಫೋಟೋವನ್ನು ಪಡೆದು ಕೃತಕ ಅಶ್ಲೀಲ ವಿಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬಂಧಿತರನ್ನು ಅಕ್ಷಯ್ ಮತ್ತು ಸಾಹುಲ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು AI ಹಾಗೂ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳ ಸಹಾಯದಿಂದ 25 ವರ್ಷದ ಯುವತಿಯ ಚಿತ್ರವನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ವಿಡಿಯೋ ತಯಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ಬಳಿಕ ಯುವತಿಯ ತಾಯಿಗೆ “ಯೋಗೇಶ್” ಎಂಬ ಹೆಸರಿನಲ್ಲಿ ನಿರಂತರವಾಗಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಬ್ಲ್ಯಾಕ್‌ಮೇಲ್‌ಗೆ ಒಳಗಾದ ಕುಟುಂಬ ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆಯ ವೇಳೆ ಆರೋಪಿಗಳ ನಿಜವಾದ ಗುರುತು ಪತ್ತೆಯಾಗಿ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳು ಹಣದ ಅಗತ್ಯದಿಂದ ಸಾಲ ತೀರಿಸಲು ಈ ಕೃತ್ಯಕ್ಕೆ ಕೈಹಾಕಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



