HomeAgriculture ಕಪ್ಪತಗುಡ್ಡದಲ್ಲಿ ಪತ್ತೆಯಾದ ವಿಶಿಷ್ಟ `ಕಾಮನ ಬಿಲ್ಲು’ ಜೇಡ

 ಕಪ್ಪತಗುಡ್ಡದಲ್ಲಿ ಪತ್ತೆಯಾದ ವಿಶಿಷ್ಟ `ಕಾಮನ ಬಿಲ್ಲು’ ಜೇಡ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಲ್ಟಿಸಿಡೇ ಕುಟುಂಬಕ್ಕೆ ಸೇರಿದ ಸ್ಟೆನಾಲೂರಿಲಸ್ ಲೆಸರ್ಟಿ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ವಿಶೇಷ ಜೇಡಗಳ ಪ್ರಭೇದ ಸಮೀಪದ ಕಪ್ಪತಗುಡ್ಡದ ಬೆಟ್ಟಗಳ ಶ್ರೇಣಿಗೆ ಹೊಂದಿಕೊಂಡಿರುವ ಮಾಗಡಿ/ಶೆಟ್ಟಿಕೆರೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಇದು ಕಪ್ಪತಗುಡ್ಡದ ಶ್ರೀಮಂತ/ವೈಶಿಷ್ಟ್ಯಪೂರ್ಣವಾದ ಜೀವ ವೈವಿಧ್ಯತೆಯನ್ನು ಸಾಕ್ಷೀಕರಿಸುತ್ತದೆ.

ಈ ಜೇಡವು ದಕ್ಷಿಣ ಭಾರತ ಮತ್ತು ಶ್ರೀಲಂಕಾ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ, ಸಂಗಮೇಶ ಕಡಗದ, ಶರಣು ಗೌಡರ, ಬೆಂಗಳೂರಿನ ಎಸ್.ಸುನಿಲ್ ಕುಮಾರ್ ಈ ಜೇಡದ ಇರುವಿಕೆಯನ್ನು ಮಾಗಡಿ ವ್ಯಾಪ್ತಿಯಲ್ಲಿ ಗುರುತಿಸಿದ್ದಾರೆ. ಇದರ ಮೈ ಬಣ್ಣವು ಆಕರ್ಷಕವಾಗಿದ್ದು, ಗಂಡು ಜೇಡಗಳ ಮುಖದ ಮುಂಭಾಗದಲ್ಲಿ ಕೆಂಪು ಮತ್ತು ನೀಲಿ ಸಮತಲ ಪಟ್ಟಿಗಳು ಮತ್ತು ಕಾಮನಬಿಲ್ಲಿನ ವರ್ಣ ಸಂಯೋಜನೆಯಂತಿರುವುದರಿಂದ ಕಾಮನಬಿಲ್ಲಿನ ಜೇಡ (ರೇನ್‌ಬೋ ಸ್ಪೈಡರ್) ಎನ್ನುತ್ತಾರೆ. ಈ ಜೇಡಗಳು ಬಲೆ ಹೇಣೆಯುವದಿಲ್ಲ ಮತ್ತು ಸ್ಥಳದಿಂದ ಸ್ಥಳಕ್ಕೆ ನೆಗೆಯುತ್ತವೆ. ಆದ್ದರಿಂದ ನೆಗೆ ಜೇಡ ಎಂಬ ಹೆಸರೂ ಇದಕ್ಕಿದೆ. ಇವು ಕೇವಲ 5ರಿಂದ 6 ಮಿ.ಮೀ ಗಾತ್ರ ಹೊಂದಿರುತ್ತವೆ. ಹೆಣ್ಣು ಜೇಡ ಗಂಡು ಜೇಡಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ.

ರೈತರಿಗೆ ಪಿಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಜೇಡಗಳು ಜೈವಿಕ ಕೀಟ ನಿಯಂತ್ರಕಗಳಾಗಿವೆ. ಇವು ತಮ್ಮ ಗಾತ್ರಕ್ಕನುಗುಳವಾಗಿ ಪ್ರತಿನಿತ್ಯ 4-5 ಕೀಟಗಳನ್ನು ತಿನ್ನುತ್ತವೆ. ಹೀಗೆ ವಾರ್ಷಿಕವಾಗಿ ಸರಾಸರಿ 800 ಮಿಲಿಯನ್ ಕೀಟಗಳನ್ನು ಭಕ್ಷಿಸುವುದರ ಮೂಲಕ ರೈತನ ಮಿತ್ರನಾಗಿ ಬೇಟೆ ಮತ್ತು ಭಕ್ಷಕದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಪ್ರಭೇದದ ಜೇಡಗಳಲ್ಲಿರುವ ವಿಷವನ್ನು ವೈದ್ಯಕೀಯ ಕ್ಷೇತ್ರಗಳಲ್ಲಿ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಗದಗ ಜಿಲ್ಲೆಯ ಕಪ್ಪತಗುಡ್ಡ ಜೀವವೈಧ್ಯ ತಾಣವಾಗಿದ್ದು, ಇಲ್ಲಿ ಅಪರೂಪದ ಅಳಿವಿನಂಚಿನಲ್ಲಿರುವ ಕೀಟಗಳು ಮತ್ತು ಹೊಸಜಾತಿಯ ಕೀಟಗಳು ಇವೆ. ನಿರಂತರ ಸಂಶೋಧನೆಯ ಮೂಲಕ ಅವುಗಳನ್ನು ಪ್ರಪಂಚಕ್ಕೆ ಪರಿಚಯಿಸಲಾಗುವುದು. ಪ್ರತಿ ಜೀವಿಯು ಆಹಾರ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸಿ ಪರಿಸರ ಸಮತೋಲವನ್ನು ಕಾಪಾಡುತ್ತವೆ. ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಲಾಗುತ್ತಿದೆ. ಮನುಷ್ಯ ಸೇರಿ ಪ್ರತಿ ಜೀವಿಯೂ ಪ್ರಕೃತಿಯ ಭಾಗವಾಗಿದ್ದು, ಪರಿಸರದ ಪ್ರತಿ ಜೀವಿಗಳ ಸಂಖ್ಯೆ ನಿರ್ದಿಷ್ಟ ಅನುಪಾತದಲ್ಲಿದ್ದಾಗ ಮಾತ್ರ ಆರೋಗ್ಯಕರ ಪರಿಸರ ಉಳಿಯುತ್ತದೆ ಎನ್ನುತ್ತಾರೆ ಜೀವ ಶಾಸ್ತçಜ್ಞರು.

“ಸೂಜಿಮೊನೆಯಷ್ಟು ಚಿಕ್ಕ ಗಾತ್ರದಿಂದ ಹಿಡಿದು ಅಂಗೈ ಆಗಲ ಗಾತ್ರ ಜೇಡಗಳು ಪ್ರಪಂಚದ ಬೇರೆ ಬೇರೆ ಕಡೆ ಸಿಗುತ್ತವೆ. ಎಲ್ಲ ಜೇಡ ಪ್ರಭೇದಗಳು ರೇಷ್ಮೆಯನ್ನು ತಯಾರಿಸಿ ದಾರ ನೂಲುತ್ತವೆ. ಅದಕ್ಕೆಂದೇ ಅವುಗಳ ಶರೀರದ ಹಿಂಬದಿಯಲ್ಲಿ ರೇಷ್ಮೆ ಉತ್ಪಾದಿಸುವ ಅಂಗವಿರುತ್ತದೆ. ಕೃಷಿ ಪೀಡಕ ಕೀಟಗಳು, ವಿರಳವಾಗಿ ಕಪ್ಪೆ, ಹಲ್ಲಿ, ಚಿಕ್ಕ ಹಕ್ಕಿಗಳನ್ನು ಸೆರೆ ಹಿಡಿಯಲು ಮೃತ್ಯು ಪಾಶಗಳನ್ನು ನೇಯುತ್ತವೆ. ಬಲೆಯನ್ನು ನಿರ್ಮಿಸದೇ ಕೀಟಗಳನ್ನು ಬೇಟೆಯಾಡುವ ಜೇಡಗಳು ಕೀಟಗಳ ಮೇಲೇ ಅಂಟನ್ನು ಉಗುಳಿ ಬಂಧಿಸುತ್ತವೆ. ಜೇಡಗಳು ಇಲ್ಲವಾದಲ್ಲಿ ಅಡವಿ, ಹುಲ್ಲುಗಾವಲು, ವಿವಿಧ ಸಸ್ಯ ಪ್ರಧಾನ ಸ್ಥಳಗಳಲ್ಲಿ ತೊಂದರೆ ನೀಡುವ ಕೀಟಗಳ ಅನಿಯಂತ್ರಿತ ಹಾವಳಿಯಿಂದ ರೋಗಗ್ರಾಸ್ತವಾಗಿ ವಿನಾಶದ ಹಾದಿ ಹಿಡಿಯುತ್ತವೆ”

– ಮಂಜುನಾಥ ನಾಯಕ.

ಜೀವವೈವಿಧ್ಯ ಸಂಶೋಧಕರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!