ಬೆಂಗಳೂರು: ನಗರದಲ್ಲಿ ಸ್ಪಾ ಕೇಂದ್ರಗಳು ಮತ್ತು ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮಾರತಹಳ್ಳಿ, ಸುಂಕದಕಟ್ಟೆ ಸಮೀಪದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯಲ್ಲಿ ಮಹಿಳೆಯರನ್ನು ಬಲವಂತವಾಗಿ ಅಥವಾ ಆಮಿಷಕ್ಕೆ ಒಳಪಡಿಸಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಕೇಂದ್ರ ಅಪರಾಧ ಶಾಖೆ (CCB) ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿ ಜಾಲವನ್ನು ಬಯಲು ಮಾಡಿದ್ದಾರೆ.
ವಿಚಾರಣೆಯ ವೇಳೆ ಆರೋಪಿಗಳು ಮೊಬೈಲ್ ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸ್ಪಾಗಳು ಮತ್ತು ಖಾಸಗಿ ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ HAL, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



