ಬೆಂಗಳೂರು: ಸಕ್ಕರೆಗೆ ಪ್ರತಿ ಕೆ.ಜಿ.ಗೆ 50 ರೂಪಾಯಿ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಕಬ್ಬು ಬೆಳೆಗಾರರ ಹೋರಾಟದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೈತರ ಹಿತ ಕಾಪಾಡಲು ಸಕ್ಕರೆಗೆ ಬೆಂಬಲ ಬೆಲೆ ಹೆಚ್ಚಿಸುವುದು ಅಗತ್ಯ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಬ್ಬಿಗೆ ದರ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ನಿಗದಿಪಡಿಸುವ ದರವನ್ನು ರೈತರಿಗೆ ನೀಡುವ ಬಗ್ಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೂ ಮಾತುಕತೆ ನಡೆಸಲಾಗಿದೆ. ರೈತ ಮುಖಂಡರ ಸಮ್ಮುಖದಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದರು.
ಕಳೆದ ಎಂಟು ವರ್ಷಗಳಿಂದ ಸಕ್ಕರೆ ಬೆಲೆ ಹೆಚ್ಚಳವಾಗಿಲ್ಲ. ರೈತರ ಬದುಕು ಸುಧಾರಿಸಬೇಕಾದರೆ ಸಕ್ಕರೆಗೆ ಕನಿಷ್ಠ 50 ರೂಪಾಯಿ ಎಂಎಸ್ಪಿ ನಿಗದಿಪಡಿಸಬೇಕು. ಇದರಿಂದ ಮಾತ್ರ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ನೀಡಲು ಸಾಧ್ಯ. ರೈತರನ್ನು ಉಳಿಸುವ ನಿಟ್ಟಿನಲ್ಲಿ ತಾವು ಸದಾ ಅವರ ಪರವಾಗಿರುವುದಾಗಿ ತಿಳಿಸಿದ ಅವರು, ಈ ಸಂಬಂಧ ಪ್ರಧಾನಮಂತ್ರಿಗಳಿಗೂ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದರು.
ಇದೇ ವೇಳೆ ಪ್ರತಿಭಟನಾಕಾರರಿಗೆ ಕಾನೂನು ಕ್ರಮಕ್ಕೆ ಅವಕಾಶವಾಗುವಂತಹ ಪರಿಸ್ಥಿತಿ ನಿರ್ಮಿಸಬಾರದು ಎಂದು ಮನವಿ ಮಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಪ್ರಕ್ರಿಯೆಯನ್ನು ಆರಂಭಿಸಬೇಕು. ರೈತರಿಗೆ ಮತ್ತಷ್ಟು ತೊಂದರೆಯಾಗಬಾರದು ಎಂದರು.
ಕಳೆದ ಸೆಪ್ಟೆಂಬರ್ನಲ್ಲಿಯೇ ಕಬ್ಬು ಅರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆದರೆ, ಕಬ್ಬು ಇನ್ನೂ ಪಕ್ವವಾಗಿಲ್ಲ, ರಸ ಕಡಿಮೆಯಾಗುತ್ತದೆ ಎಂದು ಕಾರ್ಖಾನೆಗಳು ತಿಳಿಸಿದ್ದವು. ಇದೀಗ ಮತ್ತಷ್ಟು ವಿಳಂಬ ಮಾಡುವುದು ಬೇಡ. ಹಿಂದೆ ನಡೆದ ಮಾತುಕತೆಯಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ರೈತ ಮುಖಂಡರು ಹಾಗೂ ಕಾರ್ಖಾನೆಗಳ ಮಾಲೀಕರಿಗೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ ನಿರ್ಧಾರದಂತೆ ಕಾರ್ಖಾನೆಗಳಿಂದ ರೈತರಿಗೆ ಸೂಕ್ತ ದರ ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಇದೇ ವೇಳೆ ತಿಳಿಸಿದರು.









