ಮಂಡ್ಯ: ಮಂಡ್ಯ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಕೊನೆಯುಸಿರೆಳೆದಿದೆ. ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರು ಬೈಕ್ ಅನ್ನು ಅಡ್ಡಗಟ್ಟಿದ್ದರು. ಬೈಕ್ನಲ್ಲಿದ್ದ ತಂದೆ, ತಾಯಿ ಆಯತಪ್ಪಿ ಬಿದ್ದಿದ್ದು, ಮಗು ತಲೆಗೆ ಬಲವಾದ ಪೆಟ್ಟಾಗಿತ್ತು. ರಕ್ತಸ್ರಾವದಿಂದ 3 ವರ್ಷದ ಕಂದಮ್ಮ ಸಾವನ್ನಪ್ಪಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಲಾಗಿದೆ. ASIಗಳಾದ ಜಯರಾಮ್, ನಾಗರಾಜ್, ಗುರುದೇವ್ ಅಮಾನತುಗೊಂಡವರಾಗಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿದ್ದಾರೆ.
ಕಣ್ಣೆದುರಲ್ಲೇ ಸಾವನ್ನಪ್ಪಿದ ಮಗುವನ್ನು ಪೋಷಕರು ರಸ್ತೆಯ ಮಧ್ಯೆ ಮಡಿಲಲ್ಲಿ ಇಟ್ಟುಕೊಂಡು ಗೋಳಾಡಿದ್ದಾರೆ. ಇನ್ನು ಈ ದೃಶ್ಯವನ್ನು ಕಂಡು ಕಂಡ ಸಾರ್ವಜನಿಕರು ಮಮ್ಮಲ ಮರುಗಿದ್ದು, ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಘಟನೆಯಿಂದಾಗಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೂ ತೊಂದರೆಯಾಯಿತು. ಇನ್ನು ಮೃತ ಮಗು ಹೃತೀಕ್ಷ ಸಾವು ಸಂಬಂಧ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



