ವಿಜಯಸಾಕ್ಷಿ ಸುದ್ದಿ, ಧಾರವಾಡ: ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಶಾಶ್ವತ ಸಂತೋಷಕ್ಕೆ ಕಾರಣರಾಗಿ ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಪಾಲಕರಿಗೆ ಕರೆ ನೀಡಿದರು.
ಧಾರವಾಡ ತಾಲೂಕಿನ ಹಳೇ ತೇಗೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ಮಕ್ಕಳ ತೇರು’ ಶಿಕ್ಷಣವು ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಗೆಡುವುತ್ತದೆ. ಅದು ಮಗುವಿನ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ. ಶಿಕ್ಷಣದಿಂದ ಶಿಸ್ತು, ಸಂಯಮ, ಸಹಕಾರ, ಸ್ವಾವಲಂಬನೆ, ಗೌರವ ಪಡೆಯುವಂತಾಗುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕ ಗುಣಗಳು ಬೆಳೆಯುತ್ತವೆ. ಶಿಕ್ಷಣದಿಂದ ಆರೋಗ್ಯ ವೃದ್ಧಿಸುತ್ತದೆ. ಮಕ್ಕಳಿಗೆ ಟ್ರ್ಯಾಕ್ಟರ್ ಎಂಬ ತೇರಿನ ಮೂಲಕ ಕರೆದುಕೊಂಡು ಬಂದಿರುವುದು ಸಂತಸದಾಯಕವಾಗಿದೆ ಎಂದರು.
ಬಿಆರ್‌ಪಿ ರಾಘವೇಂದ್ರ ಬಡಿಗೇರ ಮಾತನಾಡುತ್ತಾ, ಶಾಲೆ ಆರಂಭವಾಗಿದೆ-ಎಲ್ಲರೂ ಶಾಲೆಗೆ ಬನ್ನಿರಿ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಶಾಲಾ ಶಿಕ್ಷಣ ಇಲಾಖೆಯ ಪರವಾಗಿ ವಿನಂತಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಬಂಡಿವಡ್ಡರ, ಮಂಜುಳಾ ಜೋಗಿ, ಸಿದ್ಲಿಂಗಮ್ಮ ಗುದಾದರಿ ಒಂದನೇ ತರಗತಿ ಮಕ್ಕಳಿಗೆ ಹೂ ಹಾಗೂ ಕಿರೀಟ ತೊಡಿಸಿ, ಸ್ವಾಗತಿಸಿದರು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಇತರೆ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಿದರು. ದಾಖಲಾದ ಮಕ್ಕಳನ್ನು ಬಲೂನು, ಬಣ್ಣದ ಕಾಗದಗಳಿಂದ ಅಲಂಕರಿಸಿದ ಗಾಡಿಯಲ್ಲಿ ವಾದ್ಯಮೇಳದೊಂದಿಗೆ ಶಾಲೆಗೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಮಾರುತಿ ಬಂಡಿವಡ್ಡರ, ಮಂಜುಳಾ ಜೋಗಿ, ಸಿದ್ಲಿಂಗಮ್ಮ ಗುದಾದರಿ, ಬಿಆರ್‌ಪಿ ರಾಘವೇಂದ್ರ ಬಡಿಗೇರ, ಸಿಆರ್‌ಪಿ ವಿ.ಎಮ್. ಮಡಿವಾಳರ, ಎಸ್‌ಡಿಎಂಸಿ ಅಧ್ಯಕ್ಷ ಭೀಮಪ್ಪ ನವಲೂರ, ಕಲ್ಲಪ್ಪ ಕಂಬಾರ, ಭೀಮಪ್ಪ ಹಾಳೇಗೌಡ್ರ, ಮುಖ್ಯ ಗುರುಗಳಾದ ಡಿ.ಜೆ. ಪತ್ತಾರ, ಎಸ್.ವಿ. ಗೊಂಬಿ, ಎ.ಎನ್. ಸಲಗಾವ್ಕರ, ಕೆ.ಬಿ. ಪತ್ತಾರ, ರೇಣುಕಾ ಹಾರುಗೊಪ್ಪ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
‘ಮಕ್ಕಳ ತೇರು’ ಟ್ರ್ಯಾಕ್ಟರ್ ಸುತ್ತಮುತ್ತಲೂ ಕಳೆದ ವರ್ಷ ಕೈಗೊಂಡ ಶೈಕ್ಷಣಿಕ ಕಾರ್ಯಕ್ರಮಗಳ ಕೆಲವು ಭಾವಚಿತ್ರಗಳನ್ನು ಅನಾವರಣ ಮಾಡಲಾಗಿತ್ತು. ತೆಂಗಿನ ಗರಿ, ತಳಿರು-ತೋರಣ, ಹೂವುಗಳಿಂದ ಅಲಂಕಾರ ಮಾಡಿ ಮೆರವಣಿಗೆಗೆ ಸಿದ್ಧಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತ್ಯಂತ ಅದ್ಧೂರಿಯಿಂದ ಮಕ್ಕಳನ್ನು ಕರೆದುಕೊಂಡು ಮೆರವಣಿಗೆ ಮೂಲಕ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ಘೋಷಣೆಗಳನ್ನು ಕೂಗಿದರು.



