ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಭಾನುವಾರ ನಡೆದ ಕ್ವಾಲಿಫೈಯರ್-2 ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿ ಪಂಜಾಬ್ ಕಿಂಗ್ಸ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಏಕಾಂಗಿ ಹೋರಾಟದ ಫಲವಾಗಿ ಇನ್ನೊಂದು ಓವರ್ ಬಾಕಿ ಇರುವಂತೆಯೇ ದಾಖಲೆಯ ಗೆಲುವು ಸಾಧಿಸಿತು. ಇದೀಗ ಮಂಗಳವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಪಂಜಾಬ್, ಆರ್ಸಿಬಿಯನ್ನು ಎದುರಿಸಲಿದೆ.
ಮಳೆಯಿಂದಾಗಿ ಪಂದ್ಯ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭವಾದರೂ, ಓವರ್‌ಗಳನ್ನು ಕಡಿಮೆ ಮಾಡಲಿಲ್ಲ. ಆದಾಗ್ಯೂ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಕೇವಲ 8 ರನ್ ಬಾರಿಸಿ ಔಟಾದರು. ಜಾನಿ ಬೈರ್‌ಸ್ಟೋವ್ ಮತ್ತೊಮ್ಮೆ ಉತ್ತಮವಾಗಿ ಬ್ಯಾಟಿಂಗ್ ಮಾಡಿ 38 ರನ್‌ಗಳ ಕಾಣಿಕೆ ನೀಡಿದರು. ಇದಾದ ನಂತರ, ಸೂರ್ಯಕುಮಾರ್ ಮತ್ತು ತಿಲಕ್ ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ಮುಂಬೈ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು.
ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದ ನಂತರ, ಮುಂಬೈ ಇನ್ನಿಂಗ್ಸ್ ನಿಧಾನವಾಯಿತು. ಆದಾಗ್ಯೂ, ಕೊನೆಯಲ್ಲಿ ನಮನ್ ಧೀರ್ ತಮ್ಮ ಹೊಡಿಬಡಿ ಆಟದ ಮೂಲಕ ಮುಂಬೈ ತಂಡದ ಸ್ಕೋರ್ ಅನ್ನು 200 ದಾಟಿಸಿದರು. ನಮನ್ 37 ರನ್ ಗಳಿಸಿ ಔಟಾದರೆ, ನಾಯಕ ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿ ಔಟಾದರು. ಪಂಜಾಬ್ ಪರ ಅಜ್ಮತುಲ್ಲಾ ಎರಡು ವಿಕೆಟ್ ಪಡೆದರೆ, ಜೇಮಿಸನ್, ಸ್ಟೊಯಿನಿಸ್, ವಿಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ಗೂ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 72 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ನಂತರ, ಶ್ರೇಯಸ್ ಮತ್ತು ನೆಹಾಲ್ ವಧೇರಾ ನಾಲ್ಕನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಶ್ರೇಯಸ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶ್ರೇಯಸ್ ಮತ್ತು ವಧೇರಾ ನಡುವಿನ ಜೊತೆಯಾಟವನ್ನು ಅಶ್ವಿನಿ ಕುಮಾರ್ 48 ರನ್ ಬಾರಿಸಿದ್ದ ವಧೇರಾ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಆದರೆ, ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಕೊನೆಯವರೆಗೂ ಅಜೇಯರಾಗಿ ಉಳಿದು 19ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ನಾಳೆ RCB-PBKS ಮುಖಾಮುಖಿ!
ನಾಳೆ ಅಂದ್ರೆ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಉಭಯ ತಂಡಗಳೆರಡೂ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಗೆಲುವು ಯಾರಿಗೆ ಎಂಬ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿ ಮನೆಮಾಡಿದೆ.



