HomeGadag Newsಸನ್ಯಾಸಿಯ ಸಂಕಲ್ಪ ಎಲ್ಲಕ್ಕೂ ಮಿಗಿಲು

ಸನ್ಯಾಸಿಯ ಸಂಕಲ್ಪ ಎಲ್ಲಕ್ಕೂ ಮಿಗಿಲು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾರಿನಲ್ಲಿ ಅಡ್ಡಾಡುತ್ತ, ಮಠದ ಆಸ್ತಿಯನ್ನು ಬೆಳೆಸುತ್ತ ಓಡಾಡುವ ಸನ್ಯಾಸಿಗಳು ನಿಜವಾದ ಸನ್ಯಾಸಿಗಳಲ್ಲ. ಅವರು ಎಷ್ಟು ಭಕ್ತರ ಮನಗೆದ್ದಿದ್ದಾರೆ ಎನ್ನುವದರ ಮೇಲೆ ಆ ಸನ್ಯಾಸಿ ಅದೆಷ್ಟು ಶ್ರೀಮಂತರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ನಿಡಗುಂದಿಕೊಪ್ಪದ ಪೂಜ್ಯರು ಭಕ್ತರ ಮನ ಗೆದ್ದ ಶ್ರೀಮಂತ ಸನ್ಯಾಸಿಯಾಗಿದ್ದಾರೆ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ನುಡಿದರು.

ಅವರು ನಿಡಗುಂದಿಯ ಪತ್ರಿವನದಲ್ಲಿ ನಿರ್ಮಾಣವಾಗಲಿರುವ ಶ್ರೀ ಕುಮಾರೇಶ್ವರ ಸಮುದಾಯ ಭವನಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಆಶೀರ್ವಚನ ನೀಡಿದರು.

ಬಸವಣ್ಣ ಜನರ ಮನದೊಳಗೆ ಮಹಾಮನೆ ಕಟ್ಟಿದರು. ಸನ್ಯಾಸಿಯ ಸಂಕಲ್ಪ ಎಲ್ಲಕ್ಕೂ ಮಿಗಿಲಾರುತ್ತದೆ. ಅವರ ಸಂಕಲ್ಪವನ್ನು ಭಕ್ತರೆಲ್ಲರೂ ಸೇರಿ ನಿಜಗೊಳಿಸಬೇಕು. ಒಂದು ಮನೆ ಕೇವಲ ಕಲ್ಲು, ಮಣ್ಣು ಇಟ್ಟಿಗೆಗಳಿಂದಾಗುವುದಿಲ್ಲ. ಬದಲಾಗಿ ಪ್ರೀತಿ, ಪ್ರೇಮ, ದಂಪತಿಗಳ ತ್ಯಾಗದಿಂದ ಸುಂದರ ಮನೆ ನಿರ್ಮಾಣವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಪೂಜ್ಯ ಚನ್ನಬಸವ ಮಹಾಸ್ವಾಮಿಗಳ ಮುಂದೆ ಕುಳಿತು ಮಾಡಿಕೊಂಡ ಸಂಕಲ್ಪಗಳೆಲ್ಲವೂ ಈಡೇರಿವೆ. ಇದೂ ಸಹ ಈಡೇರುತ್ತದೆ. ನಮ್ಮ ಭಕ್ತರು ನಮ್ಮನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಹುಟ್ಟಿದ ಊರನ್ನು, ಕಲಿಸಿದ ಗುರುಗಳನ್ನು ಮತ್ತು ಹೆತ್ತ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು. ನನ್ನ ಹಟ್ಟೂರಾದ ಇಲ್ಲಿ ನಿರ್ಮಾಣವಾಗಲಿರುವ ಈ ಸಮುದಾಯ ಭವನಕ್ಕೆ ನಾನು ಹೆಚ್ಚಿನ ಅನುದಾನವನ್ನು ನೀಡುತ್ತೇನೆ. ಗವಿಸಿದ್ದೇಶ್ವರ ಸ್ವಾಮಿಗಳ ವಾಣಿ ವಿವೇಕಾನಂದರ ವಾಣಿಯಿದ್ದಂತೆ ಎಂದು ಹೇಳಿದರು.

ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ವೇದಿಕೆಯ ಮೇಲೆ ವಿವಿಧ ಮಠಾಧೀಶರು, ಸಿದ್ದಣ್ಣ ಬಂಡಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಕುಕನೂರ, ಮಂಜುಳಾ ರೇವಡಿ ಮುಂತಾದವರಿದ್ದರು. ಇದಕ್ಕೂ ಮೊದಲು ಶ್ರೀಗಳು ನಿಡಗುಂದಿಕೊಪ್ಪದಲ್ಲಿ ಚನ್ನಬಸವ ಮಹಾಶಿವಯೋಗಿಗಳ ಪೂಜಾ ಮಂದಿರವನ್ನು ಉದ್ಘಾಟಿಸಿದರು. ಶಿವಾಪೂರ ಅಡವಿ ಸಿದ್ದೇಶ್ವರಮಠದ ಅಡವಿ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸಪೇಟೆ-ಗದಗ ಕೆಂಪೆಸ್ವಾಮಿಮಠದ ಚಂದ್ರಶೇಖರ ದೇವರು, ಯರನಾಳ ಹಿರೇಮಠದ ಶಿವಪ್ರಸಾದ ದೇವರು, ಫಕ್ಕೀರಪ್ಪ ಕುಕನೂರ, ರಮೇಶ ಅಣಗೌಡ್ರ, ಅಂದಪ್ಪ ಬಿಚ್ಚೂರ, ಶಶಿಧರ ಹೊಟ್ಟಿನ ನಿಡಗುಂದಿ, ಶಾಂತಮ್ಮ ಅಣಗೌಡ್ರ, ನಾಗಯ್ಯ ವಿರಕ್ತಮಠ ಇತರರಿದ್ದರು. ಶ್ರೀಮಠಕ್ಕೆ 15 ಎಕರೆ ಹೊಲವನ್ನು ದಾನ ನೀಡಿದ ಶಾಂತಗಿರಿಯ ಸಜ್ಜನ ದಂಪತಿಗಳನ್ನು, ಮತ್ತಿತರ ದಾನಿಗಳನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಸಿದ್ದಯ್ಯ ಶಾಸ್ತ್ರಿಗಳು ಸ್ವಾಗತಿಸಿದರು. ಶಿಕ್ಷಕ ಡಿ.ಎಸ್. ಬಡಿಗೇರ ನಿರೂಪಿಸಿದರು.

ಹಾನಗಲ್ಲ ಶ್ರೀ ಗುರುಕುಮಾರೇಶ್ವರರ ಸಭಾಭವನ ನಿರ್ಮಾಣ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಹುಟ್ಟು-ಸಾವಿನ ಮಧ್ಯ ಇರುವ ಬದುಕನ್ನು ನಾವು ಸಾರ್ಥಕ ಮಾಡಿಕೊಳ್ಳಬೇಕಾದರೆ ಇಂತಹ ಪವಿತ್ರ ಕಾರ್ಯಗಳಿಗೆ ಶಕ್ತಿ ಮೀರಿ ದಾನ ನೀಡಬೇಕು. ಜಗತ್ತಿನಲ್ಲಿನ ಎಲ್ಲವನ್ನೂ ನಾವು ಇಲ್ಲಿಯೇ ಬಿಟ್ಟು ಹೋಗಬೇಕು. ಹೋಗುವ ಮುಂಚೆ ಕೊಟ್ಟು ಹೋಗಬೇಕು, ಇಲ್ಲವೆ ಕಟ್ಟಿ ಹೋಗಬೇಕು. ಇಲ್ಲದಿದ್ದರೆ ಅದು ಕೆಟ್ಟು ಹೋಗುತ್ತದೆ ಎಂದು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!