ವಿಜಯಸಾಕ್ಷಿ ಸುದ್ದಿ, ರೋಣ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಗ್ರಾಮದ ಹಿರಿಯ ಶೇಖರಗೌಡ ಪಾಟೀಲ ಹೇಳಿದರು.
ಮಾರನಬಸರಿ ಗ್ರಾಮದಲ್ಲಿ ನಡೆದ ಎಸ್ಐಆರ್ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಈ ಬಾರಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿರುವುದರಿಂದ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರಿಗೆ ಸೂಕ್ತ ಮಾಹಿತಿ ತಲುಪಿಸುವುದು ಅಗತ್ಯವಾಗಿದೆ. ವಿದ್ಯಾವಂತ ಯುವಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್ಒಗಳು ಮನೆ ಮನೆಗೆ ತೆರಳಿ ಅರ್ಜಿ ನಮೂನೆಗಳನ್ನು ವಿತರಿಸುತ್ತಿದ್ದು, ಅವುಗಳನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಿದರು.
ಮುಖಂಡ ಅಂದಪ್ಪ ಮರಡಿ ಮಾತನಾಡಿ, ಗ್ರಾಮದಲ್ಲಿರುವ ಪ್ರತಿಯೊಬ್ಬ ಅರ್ಹ ಮತದಾರನಿಗೂ ಎಸ್ಐಆರ್ ಕುರಿತು ಮಾಹಿತಿ ತಲುಪಿಸುವ ಕೆಲಸವನ್ನು ಯುವಕರು ಮಾಡಬೇಕು. ಹೊರ ಊರುಗಳಲ್ಲಿ ದುಡಿಯುತ್ತಿರುವ ಕುಟುಂಬಗಳಿಗೂ ಮಾಹಿತಿ ನೀಡಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಖಾದಿರಸಾಬ ಕಳಕಾಪೂರ ಮಾತನಾಡಿ, ಗ್ರಾಮದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿರುವುದರಿಂದ ಎಸ್ಐಆರ್ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪಕ್ಷಾತೀತವಾಗಿ ಮತದಾರರ ಹಕ್ಕು ರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಬಳಿಕ ಬಿಎಲ್ಒಗಳು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಅರ್ಜಿ ನಮೂನೆಗಳನ್ನು ವಿತರಿಸಿದರು.



