ಬೆಳಗಾವಿ: ಎಸ್ ಎಸ್ ಟ್ರಾವೆಲ್ಸ್ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಜರುಗಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಪ್ರಯಾಣಿಕರನ್ನ ಕರೆದುಕೊಂಡು ಬರುತ್ತಿದ್ದ ಬಸ್, ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಅಪಘಾತದಿಂದ ಟ್ರಕ್ ಹಿಂಬದಿ ಹಾಗೂ ಬಸ್ಸಿನ ಮುಂಬಾಗ ಸಂಪೂರ್ಣ ಜಖಂ ಆಗಿದೆ. ಬಸ್ ಚಾಲಕನ ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ವೇಗದಲ್ಲಿದ್ದ ಬಸ್ ಚಾಲಕ, ನಿಯಂತ್ರಣ ತಪ್ಪಿ ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟ್ರಕ್ ಪಲ್ಟಿ ಹೊಡೆದಿದೆ. ಈ ಹಿನ್ನೆಲೆ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪರಿಶೀಲಿಸಿದರು. ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.