ಗದಗ: ಶಾಲಾ ಛಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಓರ್ವ ಶಿಕ್ಷಕರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದಲ್ಲಿ ನಡೆದಿದೆ.
ಮುಂಜಾನೆಯ ಪ್ರಾರ್ಥನೆ ಬಳಿಕ ಕೊಠಡಿಗೆ ಬಂದ ವೇಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಛಾವಣಿ ಕುಸಿತಗೊಂಡಿದ್ದು, ಘಟನೆಯಲ್ಲಿ ಶಿಕ್ಷಕ ಎಂ ಡಿ ಒಂಟಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಏಕಾಏಕಿ ಶಿಕ್ಷಕ ಹಾಗೂ ಮಕ್ಕಳ ಮೇಲೆ ಛಾವಣಿ ಕಾಂಕ್ರೀಟ್ ಬಿದ್ದ ಪರಿಣಾಮ ಮಕ್ಕಳ ತಲೆ, ಶಿಕ್ಷಕರ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಶಾಲೆಯ ಪೀಠೋಪಕರಣಗಳಿಗೂ ಹಾನಿಯಾಗಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 25 ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ ಕಟ್ಟಡವಾಗಿದ್ದು, ಆರು ತಿಂಗಳ ಹಿಂದೆಯೇ ಮೇಲಧಿಕಾರಿಗಳಿಗೆ ಬಿಲ್ಡಿಂಗ್ ಶಿಥಿಲಾವಸ್ಥೆ ತಲುಪಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಇದ್ದರೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.