ಕೊಡಗು: ಕರ್ನಾಟಕದಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ಶೇ.30ಕ್ಕೂ ಹೆಚ್ಚು ಎಥೆನಾಲ್ ಪತ್ತೆಯಾಗಿದೆ. ಇದರಿಂದ ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್ಗೆ ₹14 ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಯನ್ ಆಯಿಲ್ ಪೆಟ್ರೋಲ್ ಮಾದರಿಯಲ್ಲಿ ಶೇ.31.2ರಷ್ಟು ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪರಿಸರ ಸಂರಕ್ಷಣೆ ಉದ್ದೇಶದಿಂದ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಈ ಮಿಶ್ರಣದ ಪ್ರಮಾಣದಿಂದ ಗ್ರಾಹಕರಿಗೆ ಆಗುತ್ತಿರುವ ಲಾಭ-ನಷ್ಟದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಮಾತು ಮುಂದುವರಿಸಿದ ಲಕ್ಷ್ಮಣ್, ಒಂದು ಲೀಟರ್ ಮಿಶ್ರಿತ ಪೆಟ್ರೋಲ್ನಲ್ಲಿ 700 ಮಿಲಿಲೀಟರ್ ಪೆಟ್ರೋಲ್ ಮತ್ತು 300 ಮಿಲಿಲೀಟರ್ ಎಥೆನಾಲ್ ಇದೆ ಎಂದು ಲೆಕ್ಕಾಚಾರ ನೀಡಿದ್ದಾರೆ. ಅವರ ಪ್ರಕಾರ, 700 ಮಿಲಿಲೀಟರ್ ಪೆಟ್ರೋಲ್ಗೆ ₹78 ಹಾಗೂ 300 ಮಿಲಿಲೀಟರ್ ಎಥೆನಾಲ್ಗೆ ₹20 ವೆಚ್ಚವಾಗುತ್ತದೆ. ಹೀಗಾಗಿ ಒಂದು ಲೀಟರ್ ಮಿಶ್ರಿತ ಪೆಟ್ರೋಲ್ನ ಬೆಲೆ ₹98 ಆಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ₹112ಕ್ಕೆ ಮಾರಾಟ ಮಾಡುತ್ತಿದೆ. ಇದರಿಂದ ಪ್ರತಿ ಲೀಟರ್ಗೆ ₹14 ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ 15 ತಿಂಗಳಲ್ಲಿ ಜನರಿಂದ ₹1.68 ಲಕ್ಷ ಕೋಟಿ ಹೆಚ್ಚುವರಿ ಹಣ ಸಂಗ್ರಹಿಸಲಾಗಿದೆ ಎಂದು ಹೇಳಿದ ಅವರು, ಈ ಹಣದ ಲಾಭ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಕ್ಕಳಿಗೆ ಹಾಗೂ ಸಾರಂಗ್ ಗಡ್ಕರಿ ಅವರ ಕಂಪನಿಗಳಿಗೆ ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.









