ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ತಾಂಡಾಗಳಲ್ಲಿ ಮಂಗಳವಾರ ಕ್ಷುದ್ರ ದೇವತೆಗಳನ್ನು ಸಂತೃಪ್ತಿಪಡಿಸುವ ಸೀತ್ಲಾ/ಸಾತಿಯಾಡಿ(ಏಳು ಮಕ್ಕಳ ತಾಯಿ) ದೇವತೆಯ ಹಬ್ಬವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪ್ರತಿ ವರ್ಷ ಆಷಾಢ ಮಾಸದ ಮೊದಲ ಮಂಗಳವಾರ ಸಂಪ್ರದಾಯದಂತೆ ಬಂಜಾರ ಸಮುದಾಯದವರು ಆಚರಿಸುವ ವಿಶೇಷ ಹಬ್ಬ ಇದಾಗಿದೆ. ತಾಂಡಾದಲ್ಲಿ ಭೂತ, ಪಿಶಾಚಿ, ಮಾಟ, ಮಂತ್ರಗಳಿಗೆ ಅಪಾರವಾಗಿ ಭಯಪಡುವ ಈ ಜನ ತಾಂಡದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶೀತ, ಜ್ವರ, ಕಾಲರಾ, ಸಿಡುಬು, ಗಂಟಲುಬೇನೆಯಂತಹ ಅನೇಕ ಸಾಂಕ್ರಾಮಿಕ ರೋಗಳಿಗೆ ಕ್ಷುದ್ರ ದೇವತೆಗಳೇ ಕಾರಣವಾಗಿದ್ದು, ಈ ದೇವತೆಗಳನ್ನು ತೃಪ್ತಿಪಡಿಸಿದರೆ ಇಂತಹ ಕಾಯಿಲೆಗಳು ಬರುವುದಿಲ್ಲವೆಂದು ನಂಬುತ್ತಾರೆ. ಈ ದೇವಗತೆಗಳನ್ನು `ವಾಳೆವಂಗೋಳಾರ್ ಭವಾನಿ’ (ಗಾಳಿ ದೇವತೆ) ಎಂದು ಕರೆಯುತ್ತಾರೆ.
ತಾಂಡಾ ಹೊರ ವಲಯದ ಬೇವಿನಮರದ ಬುಡದಲ್ಲಿ ತಮ್ಮ ಕುಲದ ಶಕ್ತಿ ದೇವತೆ ಮರಿಯಮ್ಮ ತಾಯಿಯ ಸಪ್ತ ಅವತಾರಗಳ 7 ಕಲ್ಲುಗಳನ್ನಿಟ್ಟು ಅವುಗಳಿಗೆ ಕೆಮ್ಮಣ್ಣ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುತ್ತಾರೆ. ಓರ್ವ ಲೂಕಡ್(ಸೇವಕ)ನನ್ನು ಪ್ರತಿಷ್ಠಾಪಿಸಿ ತೆಂಗಿನಕಾಯಿ, ಸಿಹಿ ಭೋಜನದ ಎಡೆ ಮಾಡಿ ಪೂಜೆ ಸಲ್ಲಿಸುತ್ತಾರೆ.
ಈ ವೇಳೆ ತಾವು ಸಾಕಿದ ಜಾನುವಾರುಗಳಿಗೂ ಯಾವುದೇ ರೀತಿಯ ರೋಗ-ರುಜಿನಗಳು ಬಂದು ಪ್ರಾಣ ಹಾನಿಯಾಗದಿರಲೆಂದು, ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲೆಂದು, ಸಂತಾನ ಪ್ರಾಪ್ತಿಗಾಗಿಯೂ ಪ್ರಾರ್ಥಿಸುತ್ತಾರೆ. ಸದಾ ಪ್ರಕೃತಿಮಾತೆಯ ಮಡಿಲಿನಲ್ಲಿ ಬದುಕುವ ಬಂಜಾರರು ವಿವಿಧ ಋತುವಾರು ಮಳೆಯ ಕುರಿತು, ಗುಡುಗು ಸಿಡಿಲು, ಸುಂಟರಗಾಳಿ, ಬಿರುಗಾಳಿ, ಕೆರೆಕಟ್ಟೆಗಳ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ನಿಸರ್ಗದ ಬಗ್ಗೆ ನಿಷ್ಠೆ, ನಂಬಿಕೆ ವಿಶ್ವಾಸಗಳನ್ನಿಟ್ಟು ಹಬ್ಬ ಹರಿದಿನಗಳ ಮೂಲಕ ಆಚರಣಾ ಪದ್ಧತಿಗಳನ್ನು ಪಾಲಿಸುತ್ತಾರೆ ಎಂದು ಕೊಂಡಿಕೊಪ್ಪ ತಾಂಡಾದ ಶೋಭಾ ಲಮಾಣಿ ಹೇಳಿದರು.