ನಿರೀಕ್ಷಿತ ಫಲಿತಾಂಶ ಸಿಗದಿರಲು ನಾವೇ ಕಾರಣ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜಕೀಯ ಬಿಟ್ಟು ಸರಿಯಾಗಿ ಕೆಲಸ ಮಾಡಬೇಕು. ಅಂದಾಗ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಕಾರಣ ನಾವೇ ಆಗಿದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.

Advertisement

ಅವರು ಮಂಗಳವಾರ ಸಂಜೆ, ಧಾರವಾಡ ಜೆ.ಎಸ್.ಎಸ್ ಸನ್ನಿಧಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ `ಬದಲಾವಣೆಯ ಶಿಕ್ಷಣ; ಭವಿಷ್ಯದ ನಿರ್ಮಾಣ 2025-26’ ಅಂಗವಾಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಧಾನ ಗುರುಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದ ಸಮಾರೋಪ ಹಾಗೂ ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಅವರ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾಗೂ ಮಕ್ಕಳ ಶ್ರೇಯೊಭಿವೃದ್ದಿಗಾಗಿ ಉತ್ತಮ ಕೆಲಸ ಮಾಡಬೇಕು. ನಮ್ಮ ಶಾಲೆಗಳ ಬಗ್ಗೆ ನಮ್ಮಗೆ ಹೆಮ್ಮೆ, ಗರ್ವ ಮೂಡುವಂತಾಗಬೇಕು. ಸರಕಾರದ ಸಾಕಷ್ಟು ಯೋಜನೆಗಳಿವೆ. ಇದೀಗ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ನಾವೆಲ್ಲರೂ ಇರುವಾಗ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಗುಣಮಟ್ಟದ ಶಿಕ್ಷಣ ಕಡೆಗೆ ಗಮನ ಹರಿಸಿ, ಮಿಷನ್ ವಿದ್ಯಾಕಾಶಿಯನ್ನು ಅನುಷ್ಠಾನಕ್ಕೆ ತಂದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇದ್ದರೂ ಸುಧಾರಣೆ ಆಗಿದೆ. ಅದರಂತೆ ಈ ವರ್ಷವೂ ಇನ್ನಷ್ಟು ಪ್ರಯತ್ನ ಮೂಲಕ ಧಾರವಾಡ ಜಿಲ್ಲೆಯ ವಿದ್ಯಾಕಾಶಿ ಗತವೈಭವ ಮರಳಿ ತರಲು ಪ್ರಯತ್ನಿಸಿ ಎಂದು ತಿಳಿಸಿದರು.

ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಚಿವ ಸಂತೋಷ ಲಾಡ್ ತಮ್ಮ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ತಲಾ 10 ಸಾವಿರ ರೂ ಪ್ರೋತ್ಸಾಹಧನ ನೀಡಿ, ಗೌರವಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ವೇದಿಕೆಯಲ್ಲಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೆದಮನಿ ಸ್ವಾಗತಿಸಿದರು. ಸಹಾಯಕ ಯೋಜನಾ ಸಮನ್ವಯಾಧಿಕಾರಿ ರೇಣುಕಾ ಅಮಲಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳು, ಪ್ರಾಥಮಿಕ, ಪ್ರೌಢಶಾಲೆಗಳ ಪ್ರಧಾನ ಗುರುಗಳು, ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಅಧ್ಯಕ್ಷರು, ಜನಪ್ರತಿನಿಗಳು ಭಾಗವಹಿಸಿದ್ದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಾಲೆ ಎಂದರೆ ದೇವಸ್ಥಾನ ಇದ್ದಂತೆ. ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಆಗಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲು ಬದ್ಧವಾಗಿದೆ. ಅಂತೆಯೇ ಶಿಕ್ಷಕರು ಉತ್ತಮ ಶಿಕ್ಷಣ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

“ಮಕ್ಕಳಿಗೆ ಸಮಾಜದಲ್ಲಿ ಜೀವಿಸುವುದನ್ನು ಕಲಿಸಿ, ಶಾಲೆಯ ವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ಏನಾದರೂ ತೊಂದರೆಗಳಿದ್ದರೆ ಗಮನಕ್ಕೆ ತಂದರೆ, ಸರಿಪಡಿಸಲು ಪ್ರಯತ್ನಿಸುತ್ತೇವೆ. ಆದರೆ ಮಕ್ಕಳ ಜೀವನ ರೂಪಿಸುವುದು ಶಿಕ್ಷಕರ ಕೈಯಲ್ಲಿ ಇರುವುದರಿಂದ ಮಕ್ಕಳಲ್ಲಿ ಇರುವ ಕೌಶಲ್ಯದ ಬಗ್ಗೆ, ತಂತ್ರಜ್ಞಾನದ ಬಗ್ಗೆ ಆಸಕ್ತಿ ಇದ್ದರೆ ಅವರನ್ನು ಗುರುತಿಸಿ ಮತ್ತು ಆ ವಿಷಯದ ಬಗ್ಗೆ ಅವರಿಗೆ ತಿಳಿಹೇಳಿ”

– ಸಂತೋಷ್ ಲಾಡ್,

ಉಸ್ತುವಾರಿ ಸಚಿವರು, ಧಾರವಾಡ.


Spread the love

LEAVE A REPLY

Please enter your comment!
Please enter your name here