ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಈ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ.
ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಅವರನ್ನು ಸರ್ಕಾರಕ್ಕಿಂತ ಪಕ್ಷ ಸಂಘಟನೆಯ ಜವಾಬ್ದಾರಿಗೆ ಆಯ್ಕೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೂಡ ಬಲವಾಗಿ ಕೇಳಿಬಂದಿತ್ತು. ಆದರೆ ಅವರ ಆಯ್ಕೆಗೆ ಪಕ್ಷದೊಳಗಿನ ಒಂದು ಬಣ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಪರ ಒಲವು ತೋರಿದೆ ಎನ್ನಲಾಗಿದೆ.
ಸದ್ಯ ವಿಧಾನಪರಿಷತ್ ಸದಸ್ಯರಾಗಿರುವ ಹರಿಪ್ರಸಾದ್ ಅವರು ಕಾಂಗ್ರೆಸ್ ಸಂಘಟನೆ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಪಕ್ಷವನ್ನು ಬಲಪಡಿಸುವ ಉದ್ದೇಶದಿಂದಲೇ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಸ್ಥಾನಮಾನ ನೀಡುವ ಉದ್ದೇಶವೂ ಈ ನಿರ್ಧಾರದ ಹಿಂದೆ ಇದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಬಳಿಕ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.



