ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಗದಿಯಾಗಿತ್ತು. ವಿರೋಧಿ ಸದಸ್ಯರು ಸದ್ಯದ ಅಧ್ಯಕ್ಷೆ ಗಂಗವ್ವ ದ್ಯಾಮಣ್ಣ ಜಂಗಣ್ಣವರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರಿಂದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿಯಾಗಿತ್ತು.
ಕರ್ನಾಟಕದ ಉಚ್ಛ ನ್ಯಾಯಾಲಯವು ಈ ಆಯ್ಕೆಗೆ ತಡೆಯಾಜ್ಞೆ ನೀಡಿರುವುದರಿಂದ ಸಭೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆಯೆಂದು ಉಪವಿಭಾಗಾಧಿಕಾರಿಗಳು ಆದೇಶ ಕಳಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯನ್ನು ರದ್ದುಪಡಿಸಲಾಯಿತು.
ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಅವರ ಅಧಿಕಾರದ ಅವಧಿ ಕೇವಲ ಆರೇ ತಿಂಗಳು. ಏಕೆಂದರೆ ಅಲ್ಲಿ ಯಾವುದಾದರೊಂದು ನೆಪದಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತದೆ. ಇದು ಗ್ರಾಮದ ಅಭಿವೃದ್ಧಿಗೆ ಹೊಡೆತ ನೀಡುತ್ತಿದೆ ಎಂಬುದು ಜಕ್ಕಲಿಯ ಸಾರ್ವಜನಿಕರ ಅಳಲು.
ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸಭೆ ರದ್ದಾಗಿ ಪ್ರಸ್ತುತ ಅಧ್ಯಕ್ಷರೇ ಮುಂದಿನ ಆದೇಶದವರೆಗೂ ಮುಂದುವರೆಯುತ್ತಾರೆ ಎಂದು ತಿಳಿಯುತ್ತಿದ್ದಂತೆ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಅವರ ಅಭಿಮಾನಿಗಳು, ಮುತಣ್ಣ ಕಡಗದ ಮತ್ತಿತರರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.