ವಿಜಯಸಾಕ್ಷಿ ಸುದ್ದು, ಗದಗ: ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜುಲೈ 5ರಂದು ಬೆಳಗ್ಗೆ 10.30ಕ್ಕೆ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದಿಂದ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ `ಚೈತನ್ಯ’ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳವಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನರ ದೌರ್ಬಲ್ಯ ರೋಗಗಳ ಕುರಿತು ಸಮಗ್ರ ಅಧ್ಯಯನ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ದೆಹಲಿಯ ರಾಷ್ಟ್ರೀಯ ಆಯುಷ್ ವಿಜ್ಞಾನ ಆಯೋಗ ಆಯುರ್ವೇದ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ.ಎಸ್. ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳದಡಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಭಾಗವಹಿಸುವರು ಎಂದರು.
ಸಮ್ಮೇಳನದಲ್ಲಿ ನುರಿತ ಪ್ರಾಧ್ಯಾಪಕರು, ಚಿಕಿತ್ಸಕರು ಹಾಗೂ ನರ ದೌರ್ಬಲ್ಯ ರೋಗಗಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳನ್ನು ಮತ್ತು ಪ್ರಬಂಧಗಳನ್ನು ಮಂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜ್ಞಾನದ ಹರಿವನ್ನು ಹಂಚಲಿದ್ದಾರೆ. ಡಾ. ಮುರಳಿಕೃಷ್ಣ, ಡಾ. ಅಶ್ವಿನಿಕುಮಾರ, ಡಾ. ವೀರಣ್ಣ ಜತ್ತಿ, ವಿನಾಯಕ ಅವರಿಂದ ಉಪನ್ಯಾಸ ಜರುಗಲಿದೆ ಎಂದರು.
ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನಕ್ಕೆ ಕರ್ನಾಟಕ ಹಾಗೂ ಅಂತರ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳು, ಸಂಘ-ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ಪಿಎಚ್‌ಡಿ ಮತ್ತು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನರ ದೌರ್ಬಲ್ಯ ರೋಗಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ದುಗ್ಗಪ್ಪ ಕೊಲ್ಮೆ, ಡಾ. ಬೂದೇಶ ಕನಾಜ, ಡಾ. ಮಲ್ಲಿಕಾರ್ಜುನ, ಡಾ. ಕುಮಾರ ಚೌಡಪ್ಪನವರ ಇದ್ದರು.
ನರ ದೌರ್ಬಲ್ಯ ರೋಗಗಳು ಕೇವಲ ರೋಗಗಳಲ್ಲಿ ಬದಲಾಗಿ, ಮನುಷ್ಯನ ಮೆದುಳಿನಲ್ಲಿರುವ ನರ ಕೋಶಗಳ ಮೇಲೆ ಪರಿಣಾಮ ಬೀರುವ ನರ ಕೋಶಗಳ ಪ್ರಗತಿಶೀಲ ಕ್ಷೀಣತೆ ಅಥವಾ ಸಾವಿಗೆ ಕಾರಣವಾಗುವ ಹಲವಾರು ಪರಸ್ಥಿತಿಗಳಿಗೆ ಪ್ರಮುಖ ಪದವಾಗಿದೆ. ಇದು ಪ್ರಪಂಚಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ನರ ದೌರ್ಬಲ್ಯ ಕಾಯಿಲೆಗಳ ಆತ್ಮಹತ್ಯೆ ದೈಹಿಕ ಅಸ್ವಸ್ಥತೆ ಹೆಚ್ಚಿನ ವೆಚ್ಚಗಳು ಮತ್ತು ಕಳಪೆ ಗುಣಮಟ್ಟದ ಜೀವನದೊಂದಿಗೆ ಗಣನಿಯವಾಗಿ ಜಾಗತಿಕ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಡಾ. ಸಂತೋಷ ಬೆಳವಡಿ ತಿಳಿಸಿದರು.