ಜುಲೈ 3ರಿಂದ ಫುಟ್‌ಬಾಲ್ ತರಬೇತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲೂ ಫುಟ್‌ಬಾಲ್ ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದು, ಆಸಕ್ತರಿಗೆ ಗುಣಮಟ್ಟದ ತರಬೇತಿ ನೀಡಲು ಹಾಗೂ ಅರ್ಹ ತರಬೇತುದಾರರಿಂದ ತರಬೇತಿ ಸಿಗಲಿ ಎಂಬ ಉದ್ದೇಶದಿಂದ ‘ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್’ನ ‘ಡಿ’ ಲೈಸೆನ್ಸ್ ಕೋರ್ಸ್ಗೆ ಜುಲೈ 3ರಿಂದ 8ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸರ್ಫರಾಜ ಶೇಖ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಫುಟ್‌ಬಾಲ್ ಆಟಗಾರರಿದ್ದರು. ಆದರೆ, ಇದೀಗ ಯುವಕರು, ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ತರಬೇತಿ ನೀಡಲು ಅರ್ಹ ತರಬೇತುದಾರರ ಕೊರತೆಯಿದ್ದು, ಈ ತರಬೇತಿಯಿಂದ ಕೊರತೆ ನೀಗಲಿದೆ. ಈ ಉದ್ದೇಶದಿಂದ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ ಎಂದರು.

ತರಬೇತಿ ವೇಳೆ 24 ಸ್ಲಾಟ್‌ಗಳಿದ್ದು, ಈಗಾಗಲೇ ಎಲ್ಲವೂ ನೋಂದಣಿಯಾಗಿವೆ. ಇದರಲ್ಲಿ ಗದಗನಿಂದ 18, ಜತೆಗೆ ಮೈಸೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಿಂದಲೂ ಹೆಸರು ನೋಂದಣಿಯಾಗಿದೆ. ಈ ತರಬೇತಿಗೆ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸೀಯೇಶನ್ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೂ ಸಹ ಸಹಕಾರ ನೀಡಿದ್ದು, ಅವರಿಗೂ ಸಹ ಗದಗ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಭಿನಂದಿಸಲಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಶಶಿಕುಮಾರ ಮುಂಡರಗಿ ಮಾತನಾಡಿ, ಗದಗ ಜಿಲ್ಲೆ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲೂ ಫುಟ್‌ಬಾಲ್ ಕ್ರೀಡಾಪಟುಗಳು ಇರಬೇಕು. ಆ ಮೂಲಕ ಗದಗ ಫುಟ್‌ಬಾಲ್ ಸಿಟಿಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಆಸಕ್ತಿಯಿಂದಾಗಿ ‘ಎಲೆವನ್ ಸೈಡ್’ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್ ಕ್ರೀಡಾಂಗಣ ಬರಲಿದೆ. ಇದಕ್ಕೆ ಪೂರಕವಾಗಿ ತರಬೇತುದಾರರ ಸಂಖ್ಯೆ ಹೆಚ್ಚಿ, ಫುಟ್‌ಬಾಲ್ ಕ್ರೀಡಾಪಟುಗಳು ಹೆಚ್ಚಾಗಿ, ಭಾರತ ತಂಡವೂ ಸೇರಿ ರಾಷ್ಟ್ರ ಹಾಗೂ ಅಂತಾ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆ ಪ್ರತಿನಿಧಿಸುವವರನ್ನು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಚಂದ್ರಶೇಖರ ಅಣ್ಣಿಗೇರಿ, ಓಂಕಾರ ಓದುಗೌಡರ, ರಮೇಶ ಕರಿಕಟ್ಟಿ, ಪೃಥ್ವಿ ಪರಾಪೂರ ಇದ್ದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಎ’ ಲೈಸೆನ್ಸ್ ಡಿಪ್ಲೋಮಾ ಕೋಚ್ ಹಾಗೂ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್‌ನ ಕೋಚ್ ಎಜ್ಯುಕೇಟರ್ ಶಿವಕುಮಾರ ವರದರಾಜ ಮಾತನಾಡಿ, ಫುಟ್‌ಬಾಲ್ ತರಬೇತಿ ಪಡೆಯುವ ಆಸಕ್ತರಿಗೆ ಗುಣಮಟ್ಟದ ತರಬೇತಿ ಸಿಕ್ಕರೆ ಗುಣಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ಕೋರ್ಸ್ ನೆರವಾಗಲಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here