ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸುಲೇಮಾನಿಯಾ ಶಾದಿಮಹಲ್‌ನಲ್ಲಿ ಬುಧವಾರ ದೂದನಾನಾ ಮುಹಿಬ್ಬನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ, ಮಾದಕ ವಸ್ತು ವಿರೋಧಿ ಆಂದೋಲನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ಎನ್‌ಪಿಎಂ ಝೈನುದ್ ಅಭಿದ್ ತಂಬಳ್ ಅವರು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರಿಗೆ ಅಂಬ್ಯುಲೆನ್ಸ್ ಚಾವಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಗಡ್ಡದೇವರಮಠ ಮಾತನಾಡಿ, ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು ಸಮಾಜೋಪಯೋಗಿ ಕೆಲಸವಾಗಿದೆ. ತುರ್ತು ಸಮಯದಲ್ಲಿ ರೋಗಿಗಳನ್ನು ಸಾಗಿಸಲು ಅಂಬ್ಯುಲೆನ್ಸ್ ಉಪಯುಕ್ತವಾಗುತ್ತದೆ. ಕಷ್ಟಪಟ್ಟು ಗಳಿಸಿದ ಸಂಪತ್ತಿನಲ್ಲಿ ಕೆಲ ಭಾಗವನ್ನು ಸಮಾಜದ ಅಭಿವೃದ್ಧಿಗೆ ಖರ್ಚು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.
ಅಬ್ದುಲ್ ಖಾದರ್ ಮಾತನಾಡಿ, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಅಂಬ್ಯುಲೆನ್ಸ್ಗಳು ಬೇಕೇಬೇಕು. ಬಡ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂಬ್ಯುಲೆನ್ಸ್ ಗಳ ಸೇವೆ ಆರಂಭಿಸಲಾಗಿದೆ ಎಂದು ಹೇಳಿದರು.
ಇಕ್ಬಾಲ್ ಬಾಳಿಲ್ಲ ಮಾತನಾಡಿ, ಯುವ ಜನತೆ ಸಮಾಜ ಸೇವೆ ಮಾಡಲು ಮುಂದಾಗಬೇಕು. ಯುವಕರು ಸಮಾಜದ ಶಕ್ತಿ. ಸುಂದರ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಬೇಕು. ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದ್ದಾರೆ. ಜಾತಿ, ಮತ, ಪಂಥ ಮರೆತು ಸಮಾಜ ಸೇವೆ ಮಾಡಿದಾಗ ದೇವರು ಮೆಚ್ಚುತ್ತಾನೆ ಎಂದರು.
ಎನ್‌ಪಿಎಂ ಝೈನುದ್ ಅಭಿದ್ ತಂಬಳ್, ಇಸ್ಮಾಯಿಲ್ ಆಡೂರ, ಸೈಯದ್ ಜಲಾಲುದ್ದೀನ್ ತಂಬಳ್, ಯು.ಟಿ. ಝುಲ್ವಿಕಾರ್, ದೂದಪೀರಾಂ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ದಾದಾಪೀರ್ ಮುಚ್ಛಾಲೆ, ಫಿರ್ದೋಷ್ ಅಡೂರ, ಸಿಕಂದರಬಾಷಾ ಕಣಕೆ, ಕರವೇ ಸ್ವಾಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ, ಎಮ್.ಐ. ಮುಳಗುಂದ, ದುರ್ಗಣ್ಣವರ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ವಿಜಯ ಕರಡಿ, ಸರೋಜಕ್ಕ ಬನ್ನೂರ, ಶೈಲಾ ಆದಿ, ಮುನೀರ್‌ಅಹಮ್ಮದ ಸಿದ್ದಾಪೂರ ಮುಂತಾದವರು ಹಾಜರಿದ್ದರು.