ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ಒಂಟಿಯಾಗಿ ತಾಯಿಯಾಗಲು ರೆಡಿಯಾಗಿದ್ದಾರೆ. ಐವಿಎಫ್ ಮೂಲಕ ಗರ್ಭಿಣಿಯಾಗಿರುವ ಭಾವನಾ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ ನಟಿ ಭಾವನಾ ರಾಮಣ್ಣ.
ತಾವು ತಾಯಿಯಾಗುತ್ತಿರುವ ಬಗ್ಗೆ ಮಾತನಾಡಿರುವ ನಟಿ ಭಾವನಾ ರಾಮಣ್ಣ, ತಾನು ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದೆ. ಆದರೆ ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದಿದ್ದಾರೆ.
ತಾಯಿಯಾಗುವ ತಮ್ಮ ಆಸೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಪೂರೈಸಲು ಮೊದಲು ಯೋಚಿಸಿದೆ. ಆದರೆ ಅದು ಸಾಧ್ಯವಾಗದಿದ್ದಾಗ ಸಹಾಯಕ ಗರ್ಭಧಾರಣೆ ಕಡೆಗೆ ಗಮನ ಹರಿಸಿದರು. ಆದರೆ, ಈ ದಾರಿಯೂ ಸುಲಭವಾಗಿರಲಿಲ್ಲ. ಒಂಟಿ ಮತ್ತು ಅವಿವಾಹಿತ ಮಹಿಳೆಯಾಗಿ ಐವಿಎಫ್ ಚಿಕಿತ್ಸೆ ಪಡೆಯಲು ಹಲವು ಅಡೆತಡೆಗಳನ್ನು ಎದುರಿಸಿದೆ. “ನನ್ನ ಮಕ್ಕಳಿಗೆ ತಂದೆ ಇರದಿರಬಹುದು, ಆದರೆ ಅವರು ದಯಾಳು ಪುರುಷರ ಸುತ್ತಲಿರುತ್ತಾರೆ” ಎಂದಿದ್ದಾರೆ.
ನಮ್ಮ ಮನೆ ಬಳಿ ಇರುವ ಕ್ಲಿನಿಕ್ ಹೋಗಿ ಅಲ್ಲಿ ಚಿಕಿತ್ಸೆ ಪಡೆದೆ. ವೈದ್ಯರು ನನಗೆ ತುಂಬ ಸಲಹೆ ಕೊಟ್ಟರು. ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ. ನಾನು ತಾಯಿ ಆಗ್ತಿದೀನಿ ಅಂತ ಗೊತ್ತಾದಾಗ ನನ್ನ ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ತಾಯಿ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ನನ್ನ ಕನಸು, ಆಸೆಗೆ ನನ್ನ ತಂದೆ, ಒಡಹುಟ್ಟಿದವರು ಬೆಂಬಲ ನೀಡಿದ್ದಾರೆ. ಇನ್ನೂ ಕೆಲವರು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನೋಡಿ ಓರ್ವ ಮಹಿಳೆಗೆ ಪ್ರೇರಣೆ ಸಿಕ್ಕಿ, ಆಕೆ ನಾನು ಜೀವನದಲ್ಲಿ ಒಂಟಿಯಲ್ಲ ಎಂದು ಯೋಚಿಸಿದರೆ ಅದುವೇ ನನ್ನ ಜಯ ಎಂದುಕೊಳ್ಳುತ್ತೇನೆ ಎಂದು ಭಾವನಾ ಹೇಳಿದ್ದಾರೆ.