
ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾನ್ ಸದ್ಯ ರಾಜಕೀಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಾವು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಪ್ರಮುಖ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಗಾಂಜಾ ಬೆಳೆಯದಂತೆ ಪವನ್ ಕಲ್ಯಾಣ್ ಕ್ರಮ ಕೈಗೊಂಡಿದ್ದು ಪವನ್ ಕಲ್ಯಾಣ್ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಕಡೆಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಈ ಗಾಂಜಾ ಸೇವನೆಯಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಂದು ನಿಂತಿವೆ. ಇದನ್ನು ತಡೆಯಲು ಪವನ್ ಕಲ್ಯಾಣ್ ಕ್ರಮ ಕೈಗೊಂಡಿದ್ದಾರೆ. ಪವನ್ ಕಲ್ಯಾಣ್ ಅಧಿಕಾರಕ್ಕೆ ಬರುತ್ತಿದ್ದಂತೆ ಅವರಿಗೆ ಅರಣ್ಯ ಖಾತೆ ನೀಡಲಾಯಿತು. ಹೀಗಾಗಿ, ಅವರು ಗಾಂಜಾ ಬೆಳೆ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಈ ಮೊದಲು ಆಂಧ್ರದಲ್ಲಿ ಸುಮಾರು 11 ಸಾವಿರ ಎಕರೆ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗುತ್ತಿತ್ತು. ಇದೀಗ ಇದಕ್ಕೆಲ್ಲ ಪವನ್ ಕಲ್ಯಾಣ್ ಬ್ರೇಕ್ ಹಾಕಿದ್ದಾರೆ. ಇದಕ್ಕಾಗಿ ಈಗಲ್ ಹೆಸರಿನ ತಂಡ ರಚಿಸಲಾಗಿದ್ದು, ಈ ತಂಡ ಈ ಭಾಗದಲ್ಲಿ ಬೆಳೆದ ಗಾಂಜಾ ಬೆಳೆಯನ್ನು ನಾಶ ಮಾಡಿದೆ. ಗಾಂಜಾ ಕೃಷಿಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ 375 ಹಳ್ಳಿಗಳ ಮೇಲೆ ಅಧಿಕಾರಿಗಳು ಸಂಪೂರ್ಣ ದಾಳಿ ನಡೆಸಿ ಇದಕ್ಕೆ ತಡೆ ಹಾಕಿದ್ದಾರೆ.