ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಬೇಡಿಕೆಯಷ್ಟು ಯೂರಿಯಾವನ್ನು ಕೇಂದ್ರ ಸರ್ಕಾರ ಪೂರೈಸಿದೆ. ಕೃಷಿ ಸಚಿವರು, ಕೃಷಿ ಇಲಾಖೆಯ ಅಸಮರ್ಪಕ ನಿರ್ವಹಣೆಯಿಂದ ರಾಜ್ಯದ ದೊಡ್ಡ ದಾಸ್ತಾನುದಾರರಲ್ಲಿ ಯೂರಿಯಾ ಗೊಬ್ಬರ ಸಂಗ್ರಹವಾಗಿದ್ದು, ಕೃತಕ ಅಭಾವ ಸೃಷ್ಟಿಸಿ ಲಾಭದ ಆಸೆಗಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಅವರು ಭಾನುವಾರ ಗದಗ ಜಿಲ್ಲೆ ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಂಡ ನೂತನ ಗಣಪತಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಕೃಷಿ ಸಚಿವರು ಒಂದು ಕಡೆ ಗೊಬ್ಬರ-ಬೀಜದ ಕೊರತೆಯಿಲ್ಲ ಎನ್ನುತ್ತಾರೆ. ಮತ್ತೊಂದು ಕಡೆ ಕೇಂದ್ರದ ಕಡೆ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೃಷಿ ಇಲಾಖೆಯ ನಿರ್ಲಕ್ಷದಿಂದ ಅದು ಎಲ್ಲ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ಈ ವರ್ಷ ಮೆಕ್ಕೆಜೋಳದ ಬೆಳೆ ಗುರಿಗಿಂತ ದುಪ್ಪಟ್ಟು ಬಿತ್ತನೆಯಾಗಿದೆ. ಉತ್ತಮ ಮಳೆಯೂ ಆಗಿದ್ದರಿಂದ ಯೂರಿಯಾಕ್ಕೆ ಸಾಕಷ್ಟು ಬೇಡಿಕೆ ಉಂಟಾಗಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಕಳುಹಿಸಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಪುಲಕೇಶಿ ಉಪನಾಳ, ಸಂಗಪ್ಪ ಹನಮಸಾಗರ, ಪ್ರಕಾಶ ಉಪನಾಳ, ಗಂಗಾಧರ ಮೆಣಸಿನಕಾಯಿ ಮತ್ತಿತರರಿದ್ದರು.