ಕನ್ನಡ ನಮ್ಮ ಬದುಕಿನ ಭಾಷೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ಎಂಬುದು ಬರೀ ಭಾಷೆಯಲ್ಲ. ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಅಂತರ್ಗತವಾಗಿರಬೇಕು ಎಂದು ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಭಾನುವಾರ ಪಟ್ಟಣದ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಪಟ್ಟಣದ ಸರಿಗಮಪ ರಾಗರಂಜನಿ ಮತ್ತು ವಿವಿಧ ಸಂಘಟನೆಗಳಿಂದ ನಡೆದ ಕನ್ನಡಾಂಬೆಗೆ ಗಾನ ನಮನ ಮತ್ತು ಕನ್ನಡಪರ ಸಂಘಟಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕನ್ನಡ ನಮ್ಮ ಬದುಕಿನ, ಅನ್ನದ ಭಾಷೆಯಾಗಿ ನಿತ್ಯದ ಜೀವನದಲ್ಲಿ ಬಳಕೆಯಾಗುತ್ತಿದೆ. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ-ಸ್ವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಕನ್ನಡ ನಾಡಿನ ದೇದೀಪ್ಯಮಾನವಾದ ಇತಿಹಾಸವನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅರುಹಿದರೆ ಅವರ ಎದೆಯಾಂತರಾಳದಲ್ಲಿ ಕನ್ನಡದ ಬಗ್ಗೆ ಅಭಿಮಾನ, ಸ್ವಾಭಿಮಾನ, ಗರ್ವ ಮೇಳೈಸುತ್ತದೆ ಎಂದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಗದಗ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ ಮತ್ತು ಅಧ್ಯಕ್ಷತೆ ವಹಿಸಿದ್ದ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿದರು. ಎಂ.ಎನ್. ಬಾಡಗಿ, ಎಲ್.ಎಸ್. ಅರಳಹಳ್ಳಿ, ಶರಣು ಗೋಡಿ, ರವಿ ಲಿಂಗಶೆಟ್ಟಿ, ಮಹೇಶ ಕಲಘಟಗಿ, ನಾಗರಾಜ ಚಿಂಚಲಿ, ಸರೋಜಕ್ಕ ಬನ್ನೂರ, ಚಂದ್ರಶೇಖರ ನರಸಮ್ಮನವರ, ಸುರೇಶ ನಂದೆಣ್ಣವರ, ಫಕ್ಕಿರೇಶ ಭಜಕ್ಕನವರ, ಚಂದ್ರು ಮಾಗಡಿ, ಪೂರ್ಣಾಜಿ ಖರಾಟೆ, ಸಿ.ಜಿ. ಹಿರೇಮಠ, ಮೆಹಬೂಬ್ ಹುಸೇನ್, ಬಸವರಾಜ ಹಿರೇಮನಿ, ಟಿ.ಕೆ. ರಾಠೋಡ, ಜಾಕೀರ್‌ಹುಸೇನ್ ಹವಾಲ್ದಾರ, ಸುರೇಶ ಹಟ್ಟಿ, ಮಂಜು ಮುಳಗುಂದ, ಕಾವ್ಯಾ ದೇಸಾಯಿ, ಶೈಲಾ ಆದಿ, ಗೌರಮ್ಮ ಮರಡಿ, ಚಂದ್ರು ಮಾಗಡಿ, ಮಲ್ಲಿಕಾರ್ಜುನ ನೀರಾಲೋಟಿ ನಿರ್ವಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕನ್ನಡ ಸಾರಸ್ವತ ಲೋಕಕ್ಕೆ ಆದಿಕವಿ ಕವಿ ಪಂಪನ ಸಾಹಿತ್ಯದ ಕ್ಷೇತ್ರ ಪುಲಿಗೆರೆಯ ತಿರುಳ್ಗನ್ನಡ ನಾಡಿನ ಕೊಡುಗೆ ಅಪಾರ. ಕನ್ನಡದ ತವರು ನೆಲ ಪುಲಿಗೆರೆ ನಾಡಿನಲ್ಲಿ ಜನಿಸಿದ ನಾವೆಲ್ಲ ಧನ್ಯರು. ಕನ್ನಡದ ಶ್ರೀಮಂತಿಕೆ, ಕನ್ನಡದ ಅಸ್ಮಿತೆ ವಿಜೃಂಭಿಸಲು ಕಂಕಣಬದ್ಧರಾಗಬೇಕಿದೆ ಎಂದರು.


Spread the love

LEAVE A REPLY

Please enter your comment!
Please enter your name here