ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವಸ್ಥಾನಗಳು ನಮ್ಮ ಧರ್ಮ, ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದು, ದೇವಸ್ಥಾನ ನಿರ್ಮಿಸುವ ಜವಾಬ್ದಾರಿಯೊಂದಿಗೆ ಇಲ್ಲಿ ನಿತ್ಯ ನಿರಂತರ ಪೂಜೆ, ಪ್ರಾರ್ಥನೆ, ಪಾವಿತ್ರ್ಯತೆ ಕಾಪಾಡುವಂತಾಗಬೇಕು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಾಣಗೊಂಡ ಗಣಪತಿ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವಸ್ಥಾನಗಳು ಮನುಷ್ಯರಲ್ಲಿ ಶೃದ್ಧೆ, ಭಕ್ತಿ, ಧರ್ಮಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ. ಲೋಕಕಲ್ಯಾಣ ಯೋಗೇಶ್ವರ ನಡೆದಾಡಿದ ದೇವರು ಲಿಂ.ವೀರಗಂಗಾಧರ ಜಗದ್ಗುರುಗಳು ತಪೋನಿಷ್ಠ ಪುಣ್ಯಭೂಮಿಯಲ್ಲಿ ಧರ್ಮದ ದುಂದುಭಿ ಸದಾ ಮೊಳಗುತ್ತಿದೆ. ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ವೀರ ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಈಗಾಗಲೇ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯ ಪ್ರಾರಂಭಗೊಂಡಿದೆ. ಡಿ.ಕೆ. ಶಿವಕುಮಾರ ಅವರಂತಹ ಧರ್ಮನಿಷ್ಠ ರಾಜಕಾರಣಿಗಳು ಮತ್ತು ಭಕ್ತರ ಸಹಾಯ-ಸಹಕಾರದಿಂದ 21 ಕೋಟಿ ರೂ ವೆಚ್ಚದಲ್ಲಿ ವಿಶ್ವಶ್ರೇಷ್ಠವಾದ ಕಾರ್ಯಕ್ಕೆ 6 ಕೋಟಿ ರೂ ಬಂದಿದೆ. ಈಗಾಗಲೇ ಮುಕ್ತಿಮಂದಿರ ಶ್ರೀಗಳು 5 ಸಾವಿರ ಶಿವಲಿಂಗ ಸಿದ್ದಪಡಿಸಿದ್ದಾರೆ.
ಈ ನೆಲದ ಆರಾಧೈದೈವ ಶ್ರೀಸೋಮೇಶ್ವರ, ಲಿಂ.ಜಗದ್ಗುರುಗಳ ಕೃಪಾಶೀರ್ವಾದದಿಂದ ಧರ್ಮ, ನ್ಯಾಯ, ನಿಷ್ಠೆಯಿಂದ ಬದುಕುವ ಎಲ್ಲರಿಗೂ ಒಳ್ಳೆಯದೇ ಆಗಲಿದೆ. ರಾಜ್ಯದಲ್ಲಿಯೇ ಹೆಸರಾದ ಲಕ್ಷ್ಮೇಶ್ವರದ ಎಪಿಎಂಸಿ ಕೀರ್ತಿ ಇನ್ನಷ್ಟು ಬೆಳಗಲಿ. ಅನ್ನ ನೀಡುವ ಅನ್ನದಾತ, ದೇಶ ರಕ್ಷಿಸುವ ಸೈನಿಕ, ಜ್ಞಾನ ನೀಡುವ ಶಿಕ್ಷಕರನ್ನು ಎಲ್ಲರೂ ಸದಾ ಗೌರವಿಸೋಣ ಅವರ ಶ್ರೇಯಸ್ಸು ಬಯಸೋಣ. ಈ ವರ್ಷ ದೇಶದ ರೈತರು, ಸೈನಿಕರ ಶ್ರೇಯಸ್ಸು ಬಯಸೋಣ. ಉತ್ತಮ ಮಳೆ ಬೆಳೆ ಇರಲಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಲಕ್ಷ್ಮೇಶ್ವರದ ಎಪಿಎಂಸಿ ವ್ಯಾಪಾರಸ್ಥರು ಒಗ್ಗಟ್ಟಿನಿಂದ ಮಾಡುವ ರೈತಪರ, ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಗಳು ಶ್ಲಾಘನೀಯ. ಕೋವಿಡ್ ಸಮಯದಲ್ಲಿ ಎಪಿಎಂಸಿ ವ್ಯಾಪಾರಸ್ಥರು, ರೈತರು, ಸಾರ್ವಜನಿಕರಿಗೆ ಫುಡ್ ಕಿಟ್ ವಿತರಣೆ ಮಾಡಿರುವುದು ಕಳಕಳಿಗೆ ಸಾಕ್ಷಿಯಾಗಿದೆ. ವ್ಯಾಪಾರಸ್ಥರ ಮತ್ತು ಈ ಭಾಗದ ಜನರ ಬೇಡಿಕೆಯಂತೆ ಬಂಕಾಪುರ-ಗದಗ ರಸ್ತೆ ಮೇಲ್ದರ್ಜೆಗೇರಿಸುವುದು, ಗದಗ-ಯಲವಗಿ ರೇಲ್ವೆ ಮಾರ್ಗ ಮತ್ತು ಸೇತುವೆ ಕಾರ್ಯಕ್ಕೆ ಈಗಾಗಲೇ ಸರ್ವೆಯಾಗಿದೆ ಎಂದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ ಮತ್ತು ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪಟ್ಟಣದ ಎಪಿಎಂಸಿಯಿAದ ಈ ವರ್ಷದಿಂದಲೇ ಮೆಕ್ಕೆಜೋಳ ಖರೀದಿಗೆ ಎಲ್ಲ ವ್ಯಾಪಾರಸ್ಥರು ಮುಂದಾಗಬೇಕು. ಇರುವ ವಿಶಾಲವಾದ ಜಾಗೆಯಲ್ಲಿ ಶೈಕ್ಷಣಿಕ ಸೇವೆಗೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕ ನುಡಿದ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, 1945ರಲ್ಲಿ ಆರಂಭವಾದ ಎಪಿಎಂಸಿಯ ಪ್ರಗತಿಯ ಬಗ್ಗೆ ತಿಳಿಸಿದರು. ಗಂಜಿಗಟ್ಟಿಯ ಶ್ರೀ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಬನ್ನಿಕೊಪ್ಪದ ಶ್ರೀ ಸುಜ್ಞಾನದೇವ ಶಿವಾಚಾರ್ಯರು, ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಸೇರಿ ಗಣ್ಯರು, ಜನಪ್ರತಿನಿಧಿಗಳು, ವರ್ತಕರು ಇದ್ದರು. ವರ್ತಕರ ಸಂಘದ ಸಂಗಪ್ಪ ಹನಮಸಾಗರ, ಬಸಣ್ಣ ಅಂಗಡಿ, ವಿಜಯ ಬೂದಿಹಾಳ, ಸೋಮೇಶ ಉಪನಾಳ, ಎಸ್.ಕೆ. ಕಾಳಪ್ಪನವರ ಮತ್ತು ಶಿಕ್ಷಕ ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿದರು. 3 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಸಾದ ಸೇವೆ ನಡೆಯಿತು.
ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಾತನಾಡಿ, ಲಕ್ಷ್ಮೇಶ್ವರದ ಎಪಿಎಂಸಿ ಲಿಂ. ವೀರಗಂಗಾಧರ ಜಗದ್ಗರುಗಳ ಹೆಸರಿಟ್ಟಿದ್ದು ಅವರ ಕೃಪಾಶೀರ್ವಾದಿಂದ ಮಾರುಕಟ್ಟೆ ಉತ್ತರೋತ್ತರವಾಗಿ ಬೆಳೆಯುತ್ತಿದೆ. ಅವರು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆಯೋಣ. ಆ.2ರಂದು ಮುಕ್ತಿಮಂದಿರ ಕ್ಷೇತ್ರದಲ್ಲಿ ಅವರ ಹೆಸರಿನ ಪ್ರಸಾದ ನಿಲಯದ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದರು.



