ಬೆಂಗಳೂರು:- ಹಿರಿಯ ನಿರ್ಮಾಪಕ ಆನೇಕಲ್ ಬಾಲ್ ರಾಜ್ ಅವರ ಪುತ್ರ ನಟ ಸಂತೋಷ್ ಅವರ ಸ್ಥಿತಿ ಗಂಭೀರವಾಗಿದೆ.
ಜಾಂಡೀಸ್ನಿಂದ ಬಳಲುತ್ತಿರುವ ಸಂತೋಷ್ ಬಾಲರಾಜ್ ಅವರ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಕೋಮಾಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಸಣ್ಣ ವಯಸ್ಸಿಗೆ ಜಾಂಡೀಸ್ನಿಂದ ಬಳಲುತ್ತಿರುವ ಸಂತೋಷ್ ಈಗ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜಾಂಡೀಸ್ ತೀವ್ರವಾಗಿರುವ ಕಾರಣ ಅವರನ್ನು ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಯಾಂಡಲ್ವುಡ್ನಲ್ಲಿ ಕರಿಯಾ 2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.
ಸಂತೋಷ್ ಬಾಲರಾಜ್ ಅವರ ಮೈಗೆಲ್ಲಾ ಜಾಂಡೀಸ್ ಹರಡಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗಿದೆ. ಸಂತೋಷ್ ಬಾಲರಾಜ್ ಅಮ್ಮನ ಜೊತೆ ವಾಸವಿದ್ದರು. ಅಪ್ಪ ಆನೇಕಲ್ ಬಾಲರಾಜ್, ದರ್ಶನ್ ತೂಗುದೀಪ ಅವರ ಕರಿಯ ಸಿನಿಮಾದ ನಿರ್ಮಾಪಕರಾಗಿದ್ದರು. ಅವಿವಾಹಿತರಾಗಿದ್ದ ಸಂತೋಷ್ ಬಾಲರಾಜ್, ಈಗ ಕೋಮಾದಲ್ಲಿದ್ದು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇವರು ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿದ್ದಾರೆ.