ವರ್ಷ ಕಳೆದರೂ ಮುಗಿಯದ ಕಾಮಗಾರಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿದರು.

Advertisement

ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಕೊಳ ಕಾಮಗಾರಿಗೆ ಶಾಸಕ ಜಿ.ಎಸ್. ಪಾಟೀಲ 2 ಕೋಟಿ ರೂಗಳ ಅನುದಾನವನ್ನು ಒದಗಿಸಿದ್ದಾರೆ. ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ವರ್ಷಗಳೇ ಗತಿಸಿವೆ. ನಡೆದಿರುವ ಕಾಮಗಾರಿ ಕಳಪೆ ಮಟ್ಟದಾಗಿದೆ ಮತ್ತು ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಪರಿಶೀಲಿಸಿದ ಶಾಸಕ ಜಿ.ಎಸ್. ಪಾಟೀಲ ದೂರವಾಣಿ ಮೂಲಕ ಗುತ್ತಿಗೆದಾರರನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರಲ್ಲದೆ, ಕಾಮಗಾರಿಗೆ ಚಾಲನೆ ನೀಡಿ ವರ್ಷಗಳೇ ಕಳೆದರೂ ಇನ್ನೂ ಪೂರ್ಣವಾಗಿಲ್ಲ. ಹೀಗಾದರೆ ನಾನು ಬೇರೆ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಳಪೆ ಕಾಮಗಾರಿಯನ್ನು ಸಹಿಸುವುದಿಲ್ಲ ಎಂದು ಈ ಮೊದಲೇ ತಿಳಿಸಿದ್ದೇನೆ. ಇದೇ ರಿತಿ ಮುಂದುವರೆಯುವುದು ಸರಿಯಲ್ಲ. ನೀವು ಅರ್ಥ ಮಾಡಿಕೊಳ್ಳಬೇಕು, ಇಲ್ಲದ ಕಾರಣಗಳನ್ನು ಹೇಳಿ ದಿನ ಕಳೆದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಇನ್ನೆಷ್ಟು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೀರಿ ಎನ್ನುವುದನ್ನು ಸ್ಪಷ್ಟಪಡಿಸಿ ಎಂದರು.

ಆಗ ಗುತ್ತಿಗೆದಾರ ತೀರ್ಥರಾಜ ಅಕ್ಟೋಬರ್ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಶಾಸಕರಿಗೆ ವಿವರಿಸಿದರು. ನಂತರ ಶಾಸಕರು ಚಿಕ್ಕ ಮಕ್ಕಳಿಗಾಗಿ ಪ್ರತ್ಯೇಕವಾಗಿ ನಿರ್ಮಿಸುತ್ತಿರುವ ಈಜುಕೊಳವನ್ನು ಹಾಗೂ ಇತರೆ ಕಟ್ಟಡಗಳನ್ನು ವೀಕ್ಷಿಸಿ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಿ.ಬಿ. ಸೋಮನಕಟ್ಟಿಮಠ ಉಪಸ್ಥಿತರಿದ್ದರು.

ಭೂ ಸೇನಾ ನಿಗಮದಿಂದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಈಜುಕೊಳ ನಿರ್ಮಾಣದ ಸಂದರ್ಭಲ್ಲಿ ಓರ್ವ ಕೆಲಸಗಾರನನ್ನು ತೆಗೆದುಕೊಂಡಿದ್ದು, ಅವರಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ನಿಗಮದವರೂ ಇತ್ತ ತಲೆ ಹಾಕಿಲ್ಲ. ಹೀಗಾಗಿ ಈಜುಕೊಳ ಕಾಮಗಾರಿ ತೀರಾ ಕಳಪೆಯಿಂದ ಕೂಡಿದೆ ಎಂದು ಸ್ಥಳದಲ್ಲಿದ್ದ ಕೆಲ ಕ್ರೀಡಾಪಟುಗಳು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲರು ಕ್ರೀಡಾ ಇಲಾಖೆ ಮತ್ತು ಭೂ ಸೇನಾ ನಿಗಮದ ಅಧಿಕಾರಿಗಳಿಗೆ ಎಚ್ಚರಿಸುವುದಾಗಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here