ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹುಲ್ಲೂರಿನ ವಾಲಿಕಾರ (ಗ್ರಾಮಸಹಾಯಕ) ಮಹ್ಮದರಫೀಕ ಹುಸೇನಸಾಬ ನದಾಫ್ (26) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ-ಅಮರಾಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿ ಮಹ್ಮದರಫೀಕ ನದಾಫ್ ಶುಕ್ರವಾರ ರಾತ್ರಿ 9ಕ್ಕೆ ಬೈಕ್ ಚಲಾಯಿಸಿಕೊಂಡು ಲಕ್ಷ್ಮೇಶ್ವರದಿಂದ ಹುಲ್ಲೂರಿಗೆ ಹೊರಟಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಬೈಕ್ ಸವಾರನ ಮೇಲೆಯೇ ಹಾಯ್ದ ಪರಿಣಾಮ ಮಹ್ಮದರಫೀಕ ನದಾಫ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಶನಿವಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಟ್ರ‍್ಯಾಕ್ಟರ್ ವಶಕ್ಕೆ ಪಡೆಯಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
ಮಗನ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದರೆ, ಲಕ್ಷ್ಮೇಶ್ವರ ತಾಲೂಕು ಗ್ರಾಮ ಸಹಾಯಕರ ಸಂಘದವರೂ ಸಹ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಮತ್ತು ಸಾವಿಗೆ ನ್ಯಾಯ ಹಾಗೂ ಕುಟುಂಬಕ್ಕೆ ಪರಿಹಾರ ಸಿಗಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.