ಬೆಂಗಳೂರು: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಹಬ್ ಹೀಗೆ ಹಲವು ವಿಚಾರಗಳಲ್ಲಿ ಬೆಂಗಳೂರು ಈಗಾಗಲೇ ವಿಶ್ವಮಟ್ಟದಲ್ಲಿ ಮಹತ್ವ ಪಡೆದಿದೆ. ಇದೀಗ ರಾಜಧಾನಿ ನಗರದ ಹೆರಿಗೇ ‘ಗ್ರೇಟರ್’ ಎಂಬ ಕಿರೀಟ ತೊಟ್ಟಿದೆ. ಹೌದು ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಯಾಗುತ್ತಿದೆ. ಈಗಾಗಲೇ ಗ್ರೇಟರ್ ಬೆಂಗಳೂರು ಅಥಾರಿಟಿಯ ಜಾರಿಗೆ ಸಜ್ಜಾಗಿದ್ದ ಸರ್ಕಾರ, ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಮೇಯರ್ ಕೊಠಡಿಯನ್ನು ಬದಲಾಯಿಸಿದೆ. ಮೇಯರ್ಗಳ ಫೋಟೋ ತೆರವು ಮಾಡಲಾಗಿದೆ.
ಈಗಾಗಲೇ ಐಎಎಸ್, ಐಪಿಎಸ್ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯ ಸ್ವರೂಪಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಬಿಬಿಎಂಪಿಗೆ 16 ಐಎಎಸ್, 2 ಐಪಿಎಸ್ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಈಗ 15 ಐಎಎಸ್ ಹಾಗೂ 2 ಐಪಿಎಸ್ ವೃಂದದ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ, ಪದನಾಮಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ 73 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಜಿಬಿಎಗೆ ಸದಸ್ಯರಾಗಿ ಬೆಂಗಳೂರಿನ ಮೂವರು ಸಂಸದರು, ಬೆಂಗಳೂರು ವ್ಯಾಪ್ತಿಯ ಶಾಸಕರನ್ನು ನೇಮಿಸಲಾಗಿದೆ.
ಇತ್ತ ಈ ಹಿಂದೆ ವಲಯಗಳಾಗಿ ಇದ್ದ ಬಿಬಿಎಂಪಿಯನ್ನು ಜಿಬಿಎ ಅಡಿಯಲ್ಲಿ ಐದು ಭಾಗಗಳಾಗಿ ಗುರುತಿಸಲಾಗಿದ್ದು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ನಗರಗಳಾಗಿ ವಿಭಜಿಸಲಾಗಿದೆ. ಇತ್ತ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಬಿಬಿಎಂಪಿಯ ಬದಲು ಜಿಬಿಎ ಆಡಳಿತ ರಚಿಸಲು ತಯಾರಿ ನಡೆದಿದೆ.
ಕೋಟ್ಯಂತರ ಮಂದಿಯ ಕನಸಿನ ಸೂರು ಬೆಂಗಳೂರು ಕೆಂಪೇಗೌಡರು ಕಟ್ಟಿದ್ದ ನಾಲ್ಕು ಗಡಿ ಗೋಪುರಗಳನ್ನು ದಾಟಿ ಬೆಳೆದು ಅದೆಷ್ಟೋ ವರ್ಷಗಳಾಯಿತು. ನಾಲ್ಕೈದು ಕಿಲೋ ಮೀಟರ್ ಸುತ್ತಳತೆಯ ಬೆಂಗಳೂರು ಇದೀಗ 50-60 ಕಿಲೋ ಮೀಟರ್ ವಿಸ್ತೀರ್ಣಕ್ಕೂ ಮೀರಿ ಬೆಳೆದುಬಿಟ್ಟಿದೆ. ದಿನದಿಂದ ದಿನಕ್ಕೆ ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗುತ್ತಲೇ ಹೋಗುತ್ತಿದೆ. ಇದೀಗ ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ಬಂದಿದೆ.


