ಅವೈಜ್ಞಾನಿಕ ವರ್ಗೀಕರಣದಿಂದ ಸಮುದಾಯಗಳಿಗೆ ಅನ್ಯಾಯ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಒಳಮೀಸಲಾತಿ ವರ್ಗೀಕರಣದ ಕುರಿತು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಕರಡು ಅಧಿಸೂಚನೆಯನ್ನು ವಿರೋಧಿಸಿ ಹಾಗೂ ನಾಗಮೋಹನದಾಸ ವರದಿಯನ್ನು ಅಂಗೀಕರಿಸದಿರುವಂತೆ ಲಂಬಾಣಿ, ಕೊರಮ, ಕೊರಚ, ಭೋವಿ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಂದ ತಹಸೀಲ್ದಾರ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಸರಕಾರ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸುವ ಮೂಲಕ ಒಳ ಮೀಸಲಾತಿ ನೀಡಲು ತೀರ್ಮಾನಿಸಿರುವುದು ಖಂಡನೀಯ. ಒಳ ಮೀಸಲಾತಿ ವರ್ಗೀಕರಣವನ್ನು ನೈಜತೆಯ ಆಧಾರದ ಮೇಲೆ ಮಾಡಿಲ್ಲ. ಇದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ತೀರ್ಮಾನವಾಗಿದೆ. ಇದರಿಂದ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ. ಕೊಲಂಬೋ ಸಮುದಾಯಗಳ ಜನಸಂಖ್ಯೆಯು ಹೆಚ್ಚಾಗಿದ್ದು, ಈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಉದ್ಯೋಗಿಕ ಸೌಲಭ್ಯಗಳಿಂದ ಈಗಾಗಲೇ ವಂಚಿತವಾಗಿದೆ.

ಸರಿಯಾದ ಮಾರ್ಗ ಅನುಸರಿಸದೆ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡದೆ ದತ್ತಾಂಶಗಳನ್ನು ಕ್ರೋಢೀಕರಿಸಿ ಸಿದ್ದಪಡಿಸಿರುವ ಈ ವರದಿಯನ್ನು ಅಂಗೀಕರಸಬಾರದು. ಮತ್ತೊಮ್ಮೆ ನೈಜತೆಯಿಂದ ದತ್ತಾಂಶಗಳನ್ನು ಸಮೀಕ್ಷೆಯ ಮೂಲಕ ಕ್ರೋಢೀಕರಿಸುವಂತೆ ಆಯೋಗಕ್ಕೆ ಸೂಚಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರಕಾರವು ಮುಂದಿನ ದಿನಗಳಲ್ಲಿ ಮಾಡುವ ಜನಸಂಖ್ಯೆ ಹಾಗೂ ಜಾತಿಗಣತಿಯನ್ನು ಪರಿಗಣಿಸಬೇಕು. ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನವನ್ನು ಕೈಬಿಡಬೇಕು. ಸಚಿವ ಸಂಪುಟದ ಒಳಮೀಸಲಾತಿಯ ವರ್ಗೀಕರಣದ ಕರಡು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಶ್ರೀ ಜ.ಫಕೀರೇಶ್ವರ ಮಠದಿಂದ ಆರಂಭವಾರ ಬೃಹತ್ ಪ್ರತಿಭಟನಾ ಮೆರವಣಿಗೆಯು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ನೆಹರು ವೃತ್ತದಲ್ಲಿ ಮಳೆಯ ಮಧ್ಯದಲ್ಲೇ ಅರೆಬೆತ್ತಲೆ ಮತ್ತು ಉರುಳು ಸೇವೆಯನ್ನು ಮಾಡುವುದರ ಮೂಲಕ ಪ್ರತಿಭಟಿಸಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿವು ಲಮಾಣಿ, ಜಾನು ಲಮಾಣಿ, ದೇವಪ್ಪ ಲಮಾಣಿ, ದೀಪಕ ಲಮಾಣಿ, ಸಂತೊಷ ಲಮಾಣಿ, ಲಕ್ಷ್ಮಣ ಲಮಾಣಿ, ಥಾವರೆಪ್ಪ ಲಮಾಣಿ, ಗುರಪ್ಪ ಲಮಾಣಿ, ಪರಮೇಶ ಲಮಾಣಿ, ಪುಂಡಲೀಕ ಲಮಾಣಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರತಿಭಟನೆಯ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿಎಸ್‌ಪಿ ಮುರ್ತುಜಾ ಖಾದ್ರಿ, ನರಗುಂದ ಡಿಎಸ್‌ಪಿ ಪ್ರಭುಗೌಡ ಕಿರದಳ್ಳಿ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಶಿರಹಟ್ಟಿ ಪಿಎಸ್‌ಐ ಚನ್ನಯ್ಯ ದೇವೂರ, 2 ಕೆಎಸ್‌ಆರ್‌ಪಿ ತುಕಡಿ, ಹೋಮ್‌ಗಾಡ್ಸ್ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದರು.


Spread the love

LEAVE A REPLY

Please enter your comment!
Please enter your name here