HomeGadag Newsನಿತ್ಯ ಜೀವನದಲ್ಲಿ ಸಹಬಾಳ್ವೆಯಿರಲಿ: ಎಸ್ಪಿ ರೋಹನ್ ಜಗದೀಶ್

ನಿತ್ಯ ಜೀವನದಲ್ಲಿ ಸಹಬಾಳ್ವೆಯಿರಲಿ: ಎಸ್ಪಿ ರೋಹನ್ ಜಗದೀಶ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್: ಎಲ್ಲಿ ಜಾತಿ, ಧರ್ಮ ಎಂಬುದನ್ನು ಮರೆತು ಜನರು ಒಗ್ಗಟ್ಟಾಗಿ ಬಾಳುತ್ತಾರೋ ಅಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿರುತ್ತದೆ. ಅದಕ್ಕೆ ಇಲ್ಲಿನ ಜನರ ಜೀವನವೇ ಸಾಕ್ಷಿ. ಆದ್ದರಿಂದ ನಿತ್ಯ ಜೀವನದಲ್ಲಿ ಸಹಬಾಳ್ವೆ, ಸೌಹಾರ್ದತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಎಂತಹುದೇ ಸಮಸ್ಯೆ ಬಂದರೂ ತಾವಾಗಿಯೇ ದೂರವಾಗುತ್ತವೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.

ನರೇಗಲ್ ಪಟ್ಟಣದ 3ನೇ ವಾರ್ಡ್ ನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಕೂಡಿ ಪ್ರತಿಷ್ಠಾಪಿಸುವ `ಭಾವೈಕ್ಯ ಗಣೇಶೋತ್ಸವʼಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಧರ್ಮ, ನಂಬಿಕೆ, ಕರುಣೆ ಎಂಬುದರ ಕೊರತೆಯಿಂದ ಜನರು ಸಂಬಂಧಗಳನ್ನು ದೂರಮಾಡಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಹಾಗೂ ಇತರರೆಲ್ಲೂರು ಅನ್ಯೋನ್ಯವಾಗಿ ಬದುಕುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಕೂಲಿಕಾರ್ಮಿಕರು, ಬಡವರು, ರೈತರು ಹಾಗೂ ಶ್ರಮಿಕ ವರ್ಗದ ಜನರೇ ಹೆಚ್ಚಾಗಿರುವ ನಿಮ್ಮ ಓಣಿಯಲ್ಲಿ ಅಚ್ಚುಕಟ್ಟಾಗಿ, ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ.

ಪತ್ರಿಕೆಗಳಲ್ಲಿ ಇಲ್ಲಿನ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಶೇಷ ಆಚರಣೆ ಬಗ್ಗೆ ಓದಿದ ಬಳಿಕ ಆಸಕ್ತಿ ಮೂಡಿತು. ಅದಕ್ಕಾಗಿ ನಾನೇ ಖುದ್ದು ವೀಕ್ಷಣೆಗೆ ಬಂದಿರುವೆ. ಈ ಓಣಿಯ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು. ಜನರು ಪ್ರೀತಿಯಿಂದ ಸ್ವಾಗತಿಸಿ ಗೌರವಿಸಿದ್ದಕ್ಕೆ ಬಹಳ ಸಂತೋಷವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಕರೆದು ಅವರ ಓದು, ಸಾಧನೆಗಳ ಬಗ್ಗೆ ಕೇಳಿದರಲ್ಲದೆ, ಇದೇ ಓಣಿಯಿಂದ ಮಹಿಳಾ ಪಿಎಸ್‌ಐ, ಎಸ್‌ಪಿಗಳು ಆಗಲಿ ಎಂದು ಪ್ರೋತ್ಸಾಹಿಸಿದರು.

ಈ ವೇಳೆ ನರಗುಂದ ಡಿವೈಎಸ್‌ಪಿ ಪ್ರಭುಗೌಡ ಕಿರೇದಹಳ್ಳಿ, ರೋಣ ಸಿಪಿಐ ಎಸ್.ಎಸ್. ಬೀಳಗಿ, ನರೇಗಲ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ, ಓಣಿಯ ನಿವಾಸಿಗಳಾದ ದಾದುಸಾಬ ನದಾಫ್, ಶರಣಪ್ಪ ಹಂಚಿನಾಳ, ಸದ್ದಾಂ ನಶೇಖಾನ್, ಹಸನಪ್ಪ ಕೊಪ್ಪಳ, ಪರಸಪ್ಪ ರಾಠೋಡ, ವೀರೇಶ ಪಮ್ಮಾರ, ವಿರೂಪಾಕ್ಷಯ್ಯ ಹಿರೇಮಠ, ಚನ್ನವೀರಯ್ಯ ಹಿರೇಮಠ, ಶರಣಪ್ಪ ಕೊಂಡಿ, ಹನಮಂತಪ್ಪ ಜೋಡಗಂಬಳಿ, ನಿಂಗಯ್ಯ ಸಿದ್ದನಗೌಡ್ರ, ರಾಚಯ್ಯ ಹಿರೇಮಠ ಇದ್ದರು.

ಬಡವರಿಗಾಗಿ ಹಂಚಿಕೆ ಮಾಡಲಾದ ಆಶ್ರಯ ಕಾಲೋನಿಯ ಓಣಿಗೆ ನಾಲ್ಕು ದಶಕಗಳ ನಂತರ ಎಸ್‌ಪಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಇದೇ ಮೊದಲ ಬಾರಿಗೆ ಆಗಮಿಸಿರುವುದಕ್ಕೆ ನಿವಾಸಿಗಳು ಖುಷಿಯಿಂದ ಆರತಿ ಮಾಡುವ ಮೂಲಕ ಸ್ವಾತಿಸಿದರು. ನಂತರ ಪೊಲೀಸ್ ಇಲಾಖೆಯವರು ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಎಸ್‌ಪಿ ರೋಹನ್ ಜಗದೀಶ್ ಅವರು ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು, ಶಾಲಾ ಮಕ್ಕಳನ್ನು ಮಾತನಾಡಿಸುವುದು, ಅವರಿಗೆ ಮುಂದೇನು ಆಗುತ್ತೀಯಾ ಎಂದು ಪ್ರಶ್ನೆ ಕೇಳಿ ಪ್ರೋತ್ಸಾಹಿಸಿದ್ದನ್ನು ನೋಡಿದ ಜನರು ಚಪ್ಪಾಳೆ ತಟ್ಟಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img