ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನಲ್ಲಿ ನೀರಾವರಿ ಕ್ಷೇತ್ರದಲ್ಲಿ 16512 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳದ ಇನ್ಸುರೆನ್ಸ್ ಪ್ರಿಮಿಯಂ ತುಂಬಲಾಗಿದೆ ಎಂದು ಇನ್ಸುರೆನ್ಸ್ ಅಧಿಕಾರಿಗಳು ಹೇಳುತ್ತಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಮೆಕ್ಕೆಜೋಳದ ಸಮೀಕ್ಷೆ ನಡೆಸದೇ ಅಧಿಕಾರಿಗಳು 50:50 ಅನುಪಾತದಲ್ಲಿ ಇನ್ಸುರೆನ್ಸ್ ಅವಾಂತರ ಸೃಷ್ಟಿಸಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಜರುಗಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ತಾಲೂಕಿನಲ್ಲಿ ಒಟ್ಟು 816 ಹೆಕ್ಟೇರ್ ಹಾನಿಯಾಗಿರುವ ವರದಿ ನೀಡಿದ್ದಾರೆ. ಬಹುತೇಕ ರೈತರು ಹಾನಿಗೊಳಗಾದ ತಮ್ಮ ಜಮೀನಿಗೆ ಭೇಟಿ ನೀಡಿಲ್ಲ ಎಂದು ನನ್ನ ಬಳಿ ಹೇಳಿಕೊಂಡಿದ್ದು, ಇದರಿಂದ ರೈತರು ನಷ್ಟ ಅನುಭವಿಸುವಂತಾಗುತ್ತಿದೆ. ಆದ್ದರಿಂದ ಈ ಕೂಡಲೇ ಶಿರಹಟ್ಟಿ ತಾಲೂಕಿಗೆ ಕೃಷಿ ಇಲಾಖೆಗೆ ಬೇರೆ ಅಧಿಕಾರಿಯನ್ನು ನಿಯೋಜಿಸಬೇಕೆಂದು ಸಭೆಯಲ್ಲಿ ಠರಾವು ಪಾಸು ಮಾಡುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ತಹಸೀಲ್ದಾರ ರಾಘವೇಂದ್ರ ರಾವ್, ಗದಗ ಆಹಾರ ಇಲಾಖೆಯ ಉಪನಿರ್ದೆಶಕ ರಮೇಶ ಎಸ್, ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ, ಎಡಿಎ ರೇವಣೆಪ್ಪ ಮನಗೂಳಿ, ಸಮಾಜ ಕಲ್ಯಾಣಾಧಿಕಾರಿ ಗೋಪಾಲ ನಾಯ್ಕ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಶಿರಸ್ತೇದಾರ ಎಸ್.ಎಸ್. ಅಸ್ಕಿ, ಕಂದಾಯ ನಿರೀಕ್ಷಕ ಕಾತ್ರಾಳ ಮುಂತಾದವರು ಉಪಸ್ಥಿತರಿದ್ದರು.
ಮಳೆಯಿಂದ ಹಾನಿಗೀಡಾಗಿದೆ ಎಂದು ವರದಿ ನೀಡಿದರೆ ಇನ್ಸುರೆನ್ಸ್ ಕ್ಲೇಮ್ ಆಗುವುದಿಲ್ಲ ಎನ್ನುವದಕ್ಕಾಗಿ ಒಣ ಬೇಸಾಯದ ಮೆಕ್ಕೆಜೋಳ ಪರಿಶೀಲನೆ ಮಾಡಿಲ್ಲ. ತಾಲೂಕಿನಲ್ಲಿ ಕಳೆದ 4 ವರ್ಷಗಳಿಂದ ಕೃಷಿ ಅಧಿಕಾರಿಗಳು ಇನ್ಸುರೆನ್ಸ್ ಕಂಪನಿಯವರೊಂದಿಗೆ ಶಾಮೀಲಾಗಿ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಕೆಲಸ ಮಾಡುವುದು ಬೇಡ ಎಂದು ವಡವಿಯ ರಾಜೀವರಡ್ಡಿ ಬಮ್ಮನಕಟ್ಟಿ ಹಾಗೂ ಮಾಚೇನಹಳ್ಳಿಯ ಶಂಕರ ಮರಾಠೆ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಭೆಯಲ್ಲಿ ವಿವರಿಸಿದರು.