ಬೆಂಗಳೂರು:- ಮುಂದಿನ ಜನ್ಮದಲ್ಲಿ ಮುಸ್ಲಿಂರಾಗಿ ಹುಟ್ಟಬೇಕು ಎಂಬ ಶಾಸಕ ಸಂಗಮೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶಾಸಕರ ಆಸೆ ಬಗ್ಗೆ ಅವರನ್ನು ಹೋಗಿ ಕೇಳಿ, ಅದು ನನಗೆ ಗೊತ್ತಿಲ್ಲ. ನಾನು ಮಾತ್ರ ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕು, ಭಾರತೀಯನಾಗಿ ಹುಟ್ಟಬೇಕು ಅನ್ನೋದು ನನ್ನಾಸೆ. ಅವರಿಗೆ ಆ ರೀತಿ ಅಸೆ ಇದ್ದರೆ ಅವರು ಉತ್ತರಿಸಲಿ ಎಂದರು.
ಹಿಂದೆ ಮಾಜಿ ಪ್ರಧಾನ ಮಂತ್ರಿಗಳು ಏನು ಹೇಳಿದ್ರು ಗೊತ್ತಾ? ಎಂದು ಪರೋಕ್ಷವಾಗಿ ದೇವೇಗೌಡರ ಹೆಸರು ಹೇಳದೇ ಅವರ ಮಾತಿನ ಬಗ್ಗೆ ಪ್ರಸ್ತಾಪಿಸಿದರು. ನಾನು ಈಗ ಅವರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಅವರವರ ಆಯ್ಕೆ ಅವರವರಿಗೆ ಬಿಡಬೇಕು. ಅದು ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ಸರ್ಕಾರ ಬಂದಾಗಲೇ ಭದ್ರಾವತಿಯ ರೀತಿಯ ಘಟನೆಗಳು ನಡೆಯುತ್ತವೆ ಎಂಬ ಬಿಜೆಪಿ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಉತ್ತರ ಕೊಡೋಕೆ ನಾನು ಮಿನಿಸ್ಟರ್ ಆಗಿಲ್ಲ. ಸರ್ಕಾರದ ಕುಮ್ಮಕ್ಕಿನಿಂದ ಬಿಜೆಪಿಯವರು ಹೇಳ್ತಾರಾ? ತಪ್ಪು ಮಾಡಿದಾಗ ಶಿಕ್ಷೆ ಆದಾಗ ಕಾನೂನು ಇದೆ. ಬಿಜೆಪಿಯವರು ಏನು ಹೇಳ್ತಾರೆ ಅಂತ ಅದಕ್ಕೆ ಉತ್ತರ ಕೊಡೋಕೆ ನಾನಿಲ್ಲ ಎಂದಿದ್ದಾರೆ.