ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ ವಿರುದ್ಧ ನಿರ್ಮಾಪಕ ರಾಘವೇಂದ್ರ ಹೆಗಡೆ ಎಂಬುವವರು ಮುಂಬೈನಲ್ಲಿ ವಂಚನೆ ಆರೋಪ ಪ್ರಕರಣ ದಾಖಲಿಸಿದ್ದಾರೆ. ರಾಘವೇಂದ್ರ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಧ್ರುವ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಆದರೆ ಇದೀಗ ನ್ಯಾಯಾಲಯ ಧ್ರುವ ಸರ್ಜಾ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಸಿನಿಮಾ ಮಾಡುವುದಾಗಿ ಹೇಳಿ ಧ್ರುವ ಸರ್ಜಾ ಅವರಿಗೆ ರಾಘವೇಂದ್ರ ಹೆಗಡೆ 3.10 ಕೋಟಿ ರೂಪಾಯಿ ಹಣ ನೀಡಿದ್ದರಂತೆ. ಆದ್ರೆ ಸಿನಿಮಾ ಮಾಡಲು ಡೇಟ್ಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ರಾಘವೇಂದ್ರ ಹೆಗಡೆ ಎಂಬುವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು.
ಪ್ರಕರಣದ ಸಂಬಂಧ ಧ್ರುವ ಸರ್ಜಾ ಪರ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೆ, ಇದೊಂದು ಸಿವಿಲ್ ಮೊಕದ್ದಮೆ ಆಗಿದ್ದು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಸಹ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಘವೇಂದ್ರ ಹೆಗಡೆ ಎಂಬುವರು ನೀಡಿರುವ ದೂರಿನ ಅನ್ವಯ, 2018 ರಲ್ಲಿ ಧ್ರುವ ಸರ್ಜಾ ಅವರು ‘ಸೋಲ್ಜರ್’ ಹೆಸರಿನ ಸಿನಿಮಾ ಮಾಡಲು ಮುಂಗಡವಾಗಿ 3 ಕೋಟಿ ರೂಪಾಯಿ ಹಣ ಪಡೆದಿದ್ದರಂತೆ. ರಾಘವೇಂದ್ರ ಅವರು ಅದನ್ನು ವಿವಿಧೆಡೆ ಸಾಲ ಮಾಡಿ ಧ್ರುವ ಅವರಿಗೆ ನೀಡಿದ್ದರಂತೆ. ಆ ಬಳಿಕ ಸಿನಿಮಾದ ಚಿತ್ರಕತೆ ಬರೆಯುವವರಿಗೆ ಮತ್ತು ಪ್ರಚಾರಕ್ಕೆಂದು 28 ಲಕ್ಷ ರೂಪಾಯಿ ಪಡೆದರಂತೆ. ಆರಂಭದಲ್ಲಿ ಚಿತ್ರಕತೆ ಮಾತುಕತೆ ವಿಚಾರವಾಗಿ ಸಂಪರ್ಕದಲ್ಲಿದ್ದ ಧ್ರುವ ಸರ್ಜಾ ಆ ಬಳಿಕ ರಾಘವೇಂದ್ರ ಅವರ ಸಂಪರ್ಕಕ್ಕೆ ಸಿಗಲಿಲ್ಲವಂತೆ. ಸಿನಿಮಾ ಡೇಟ್ಸ್ ಸಹ ನೀಡಲಿಲ್ಲವಂತೆ. ಇದೇ ಕಾರಣಕ್ಕೆ ರಾಘವೇಂದ್ರ ಅವರು ಧ್ರುವ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.