ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಸ್ತೆಹ್ ಇಂದು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
78 ವರ್ಷದ ಮನ್ಸೌರೆ ಖೋಜಸ್ತೆಹ್ ಅವರು ದಾಳಿಯ ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ನಡೆದ ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಮೃತಪಟ್ಟಿದ್ದರು. ಟೆಹ್ರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಯಲ್ಲಿ ಪ್ರಮುಖ ವಾಯು ನೆಲೆಗಳು ಹಾಗೂ ಭದ್ರತಾ ಕೇಂದ್ರಗಳು ಹಾನಿಗೊಳಗಾಗಿದ್ದವು.
ಖಮೇನಿ ಸಾವಿನ ವಿಷಯವನ್ನು ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಇರಾನ್ ಮಾಧ್ಯಮಗಳು ಅಧಿಕೃತ ದೃಢೀಕರಣ ನೀಡಿದ್ದವು. ದಾಳಿಯ ನಂತರ ಗಾಯಗೊಂಡಿದ್ದ ಖಮೇನಿಯವರ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲಾಗಿದೆ.
ಭವಿಷ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿ ಸಂಭವಿಸಬಹುದು ಎಂಬ ಅಂದಾಜಿನ ಹಿನ್ನೆಲೆ ಇರಾನ್ ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸಲು ಪ್ರಯತ್ನಿಸಿತ್ತು. ಆದರೆ ದಾಳಿಯ ಸಮಯದಲ್ಲಿ ಆ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ಖಮೇನಿ ಸೇರಿದಂತೆ ಉನ್ನತ ಮಟ್ಟದ ಕಮಾಂಡರ್‌ಗಳು ದಾಳಿಗೆ ಬಲಿಯಾದರು ಎಂಬ ಮಾಹಿತಿಯೂ ಹೊರಬಂದಿದೆ.
ಈ ಘಟನೆ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಪ್ರದೇಶದ ಭದ್ರತಾ ಪರಿಸ್ಥಿತಿ ಗಂಭೀರವಾಗುತ್ತಿದೆ.



