ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ದೋಷ ಹಾಗೂ ಸಂಚಾರ ವಿಳಂಬದ ಘಟನೆಗಳು ಮುಂದುವರಿದಿವೆ.
ಇದೀಗ ಪರ್ಪಲ್ ಲೈನ್ನಲ್ಲಿ ಮತ್ತೊಂದು ಅಡಚಣೆ ಎದುರಾಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಸುಮಾರು 10 ನಿಮಿಷಗಳ ಕಾಲ ನಿಂತಿದೆ.
ಶುಕ್ರವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ಚಲ್ಲಘಟ್ಟದಿಂದ ವೈಟ್ಫೀಲ್ಡ್ ಕಡೆಗೆ ಸಂಚರಿಸುತ್ತಿದ್ದ ಮೆಟ್ರೋ ರೈಲು ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿಂತಿದೆ. ತಾಂತ್ರಿಕ ಕಾರಣಗಳಿಂದ ಪ್ರಯಾಣ ವಿಳಂಬವಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅಡಚಣೆಗೆ ವಿಷಾದಿಸುತ್ತೇವೆ ಎಂದು ರೈಲಿನಲ್ಲಿ ಪ್ರಕಟಣೆ ನೀಡಲಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಸುಮಾರು 10 ನಿಮಿಷಗಳ ಬಳಿಕ ರೈಲು ಮತ್ತೆ ಸಂಚಾರ ಆರಂಭಿಸಿದೆ. ಆದರೆ, ಬೆಳಗಿನ ಪೀಕ್ ಅವರ್ನಲ್ಲೇ ಈ ಘಟನೆ ಸಂಭವಿಸಿದ್ದರಿಂದ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ನೂಕುನುಗ್ಗಲು ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
20ರಿಂದ 25 ನಿಮಿಷ ತಡವಾಗಿ ಗಮ್ಯಸ್ಥಾನ ತಲುಪಿದ ಪ್ರಯಾಣಿಕರು:
ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ರೈಲು ಹೊರಟ ಬಳಿಕವೂ ಪ್ರತಿ ನಿಲ್ದಾಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ನಿಲುಗಡೆ ನೀಡಿದೆ. ಇದರಿಂದ ಪ್ರಯಾಣಿಕರು ತಮ್ಮ ಗಮ್ಯಸ್ಥಾನ ತಲುಪಲು ಸುಮಾರು 20ರಿಂದ 25 ನಿಮಿಷ ತಡವಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಇತ್ತೀಚಿನ ದಿನಗಳಲ್ಲಿ ಮೆಟ್ರೋ ಸಂಚಾರದಲ್ಲಿ ಉಂಟಾದ ಅಡಚಣೆಗಳು:
ಜೂನ್ 23, 2026: ಪರ್ಪಲ್ ಲೈನ್ನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಸಂಜೆ ಪೀಕ್ ಅವರ್ನಲ್ಲಿ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಅಂಡರ್ಗ್ರೌಂಡ್ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.
ಜುಲೈ 22, 2026: ಬೆಳಗ್ಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾದ ಕಾರಣ ಗ್ರೀನ್ ಲೈನ್ನ ಯಲಹಂಕ–ಮಾದಾವರ ನಡುವಿನ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು 8.45ಕ್ಕೆ ವಿದ್ಯುತ್ ಪೂರೈಕೆ ಮರುಸ್ಥಾಪನೆಯಾದ ಬಳಿಕ ರೈಲು ಸಂಚಾರ ಸಹಜ ಸ್ಥಿತಿಗೆ ಮರಳಿತ್ತು.
ಮೇ 4, 2026: ವಿದ್ಯುತ್ ವ್ಯತ್ಯಯದಿಂದ ಕಬ್ಬನ್ ಪಾರ್ಕ್ ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆ ಸ್ಥಗಿತಗೊಂಡಿತ್ತು. ಸುರಕ್ಷತೆಯ ದೃಷ್ಟಿಯಿಂದ ಬೆಳಗ್ಗೆ 7ರಿಂದ 11ರವರೆಗೆ ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆ ನೀಡಿರಲಿಲ್ಲ.
ಪದೇಪದೇ ತಾಂತ್ರಿಕ ಅಡಚಣೆಗಳಿಂದ ಮೆಟ್ರೋ ಪ್ರಯಾಣ ವಿಳಂಬವಾಗುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.










