ಬಳ್ಳಾರಿ: ವೈದ್ಯಕೀಯ ಲೋಕದಲ್ಲಿ ಅತ್ಯಂತ ಅಪರೂಪವೆಂದು ಪರಿಗಣಿಸಲಾದ ‘ಫೀಟಸ್ ಇನ್ ಫೀಟು’ ಶಸ್ತ್ರಚಿಕಿತ್ಸೆಯನ್ನು ಬಳ್ಳಾರಿಯ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದೆ.
ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಮತ್ತೊಂದು ಭ್ರೂಣವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಬಳ್ಳಾರಿಯ ಬಿಎಂಸಿಆರ್ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆದಿದೆ. ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡವು ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಈ ಅಪರೂಪದ ಸಮಸ್ಯೆಯನ್ನು ಪತ್ತೆಹಚ್ಚಿತ್ತು. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಜನನದ ಬಳಿಕ ಅಗತ್ಯ ತಪಾಸಣೆ ನಡೆಸಿ, ವೈದ್ಯರು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದರು.
ನಂತರ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್, ಡಾ. ಅಶ್ವಿತಾ ಸೇರಿದಂತೆ ವೈದ್ಯರು, ಅರಿವಳಿಕೆ ತಜ್ಞರು ಹಾಗೂ ಶುಶ್ರೂಷಕರು ಸಹಕರಿಸಿದರು.
ಏನಿದು ಫೀಟಸ್ ಇನ್ ಫೀಟು?
‘ಫೀಟಸ್ ಇನ್ ಫೀಟು’ ಎನ್ನುವುದು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ. ತಾಯಿಯ ಗರ್ಭದಲ್ಲಿ ಬೆಳವಣಿಗೆಯಾಗುವ ಅವಳಿ ಭ್ರೂಣಗಳಲ್ಲಿ ಒಂದು ಭ್ರೂಣ ಮತ್ತೊಂದು ಮಗುವಿನ ದೇಹದೊಳಗೆ ಸೇರಿಕೊಂಡು ಬೆಳವಣಿಗೆ ನಿಲ್ಲಿಸುವ ಸ್ಥಿತಿಯನ್ನು ಹೀಗೆ ಕರೆಯಲಾಗುತ್ತದೆ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯಕೀಯ ಮಾಹಿತಿ ತಿಳಿಸುತ್ತದೆ.
ಸಮಯಕ್ಕೆ ಸರಿಯಾಗಿ ಸಮಸ್ಯೆಯನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವಿನ ಆರೋಗ್ಯ ಸುಧಾರಿಸಲು ಸಾಧ್ಯವಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರು ಕಳೆದ 22 ವರ್ಷಗಳಿಂದ ಸುಧಾರಿತ ಮಕ್ಕಳ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, 2008ರಲ್ಲಿಯೂ ವಿಮ್ಸ್ ಆಸ್ಪತ್ರೆಯಲ್ಲಿ ಇಂತಹದ್ದೇ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಂ., ವೈದ್ಯಕೀಯ ಅಧೀಕ್ಷಕ ಡಾ. ಅರುಣ್ ಸೇರಿದಂತೆ ಆಡಳಿತ ಮಂಡಳಿಯ ಸಹಕಾರಕ್ಕೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.










