ಬಳ್ಳಾರಿ: ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು ಅವರಿಗೆ ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ (NBW) ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದ್ದು, ಸ್ಥಳೀಯ ಪೊಲೀಸರ ಸಹಕಾರ ಕೋರಿದೆ.
ಬಿಹಾರ ಪೊಲೀಸರ ತಂಡ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ಸಂಪರ್ಕಿಸಿ, ಬಂಧನ ಪ್ರಕ್ರಿಯೆಗೆ ಸಹಕಾರ ನೀಡುವಂತೆ ಮನವಿ ಮಾಡಿದೆ ಎನ್ನಲಾಗಿದೆ. ಈ ಕುರಿತು ಎಸ್ಪಿ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಚರ್ಚೆ ನಡೆಸಿದ್ದಾರೆ.
ಆದರೆ, ಸುರೇಶ್ ಬಾಬು ವಿರುದ್ಧ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿಯಾಗಿದೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ವಾರಂಟ್ ಹಿಂದಿನ ಕಾರಣವೇನು ಎಂಬ ಕುತೂಹಲ ಮೂಡಿದ್ದು, ಮಾಜಿ ಶಾಸಕರು ಬಂಧನದ ಭೀತಿ ಎದುರಿಸುವಂತಾಗಿದೆ.
ಈ ಹಿಂದೆ ಬೇಲೇಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ 2013ರ ಸೆಪ್ಟೆಂಬರ್ 19ರಂದು ಸಿಬಿಐ ಅಧಿಕಾರಿಗಳು ಸುರೇಶ್ ಬಾಬು ಅವರನ್ನು ಬಂಧಿಸಿದ್ದರು. 2009ರಿಂದ 2011ರ ಅವಧಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಕಂಪನಿಗೆ ಸೇರಿದ ಅದಿರನ್ನು ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ಸಾಗಿಸಿದ ಆರೋಪ ಅವರ ಮೇಲಿತ್ತು.
ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನಸಭೆಯಲ್ಲಿ ತೋಳೇರಿಸಿ ಮಾತನಾಡಿದ್ದಲ್ಲದೆ, ಬೆಂಗಳೂರಿನಿಂದ ಬಳ್ಳಾರಿಗೆ ನಡೆದ ಪಾದಯಾತ್ರೆಯ ಸಂದರ್ಭದಲ್ಲಿಯೂ ಸುರೇಶ್ ಬಾಬು ಪ್ರಮುಖವಾಗಿ ಸುದ್ದಿಯಾಗಿದ್ದರು.
ಸದ್ಯ ಬಿಹಾರ ನ್ಯಾಯಾಲಯದ ವಾರಂಟ್ ಹಿನ್ನೆಲೆಯಲ್ಲಿ ಸುರೇಶ್ ಬಾಬು ಅವರ ಬಂಧನವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.









