ಹಾಂಗ್ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸೋಲಿನ ಸರಣಿ ಮುಂದುವರಿದಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧವೂ ಮುಗ್ಗರಿಸಿದೆ. ಮೌಂಗ್ ಕಾಕ್ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಯುಎಇ ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ನಟರಾಜನ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ!
ಟಾಸ್ ಗೆದ್ದ ಯುಎಇ ತಂಡದ ನಾಯಕ ಖಾಲಿದ್ ಶಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಿತೀಶ್ ರಾಣಾ ಕೇವಲ 6 ರನ್ ಗಳಿಸಿ ಔಟಾದರೆ, ರಾಹುಲ್ ತೆವಾಟಿಯಾ 1 ರನ್ಗೆ ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್ ಕೂಡ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು.
ಈ ನಡುವೆ ರಾಹುಲ್ ತ್ರಿಪಾಠಿ 7 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 24 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಯಕ ಕೃನಾಲ್ ಪಾಂಡ್ಯ 15 ರನ್ ಗಳಿಸಿದರು.
ಆದರೆ, ಎಲ್ಲರ ಗಮನ ಸೆಳೆದಿದ್ದು ಟಿ. ನಟರಾಜನ್ ಅವರ ಬ್ಯಾಟಿಂಗ್ ಪ್ರದರ್ಶನ. ಕೊನೆಯ ಬ್ಯಾಟರ್ ಆಗಿ ಕಣಕ್ಕಿಳಿದ ನಟರಾಜನ್ ಕೇವಲ 14 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 38 ರನ್ ಸಿಡಿಸಿದರು. ಇವರ ಸ್ಫೋಟಕ ಆಟದ ನೆರವಿನಿಂದ ಭಾರತ 6 ಓವರ್ಗಳಲ್ಲಿ 94 ರನ್ ಗಳಿಸಿ ಆಲೌಟ್ ಆಯಿತು.
4.2 ಓವರ್ಗಳಲ್ಲೇ ಯುಎಇಗೆ ಗೆಲುವು!
95 ರನ್ಗಳ ಗುರಿ ಬೆನ್ನಟ್ಟಿದ ಯುಎಇ ತಂಡದ ಆರಂಭಿಕರಾದ ಖಾಲಿದ್ ಶಾ ಮತ್ತು ಅನ್ಶ್ ಟಂಡನ್ ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಮೊದಲ ಓವರ್ನಿಂದಲೇ ಸಿಕ್ಸರ್ಗಳ ಸುರಿಮಳೆಗೈದ ಈ ಜೋಡಿ ಕೇವಲ 2.3 ಓವರ್ಗಳಲ್ಲಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿತು.
ಯುಎಇ ನಾಯಕ ಖಾಲಿದ್ ಶಾ ಕೇವಲ 14 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 52 ರನ್ ಸಿಡಿಸಿದರು. ಮತ್ತೊಂದೆಡೆ ಅನ್ಶ್ ಟಂಡನ್ 12 ಎಸೆತಗಳಲ್ಲಿ 5 ಸಿಕ್ಸರ್ಗಳ ನೆರವಿನಿಂದ ಅಜೇಯ 39 ರನ್ ಚಚ್ಚಿದರು.
ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ಗೆ ಭಾರತದ ಬೌಲರ್ಗಳ ಬಳಿ ಉತ್ತರವೇ ಇರಲಿಲ್ಲ. ಅಂತಿಮವಾಗಿ ಯುಎಇ ತಂಡ ಕೇವಲ 4.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಗಳಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು.
ಹೀಗೆ ಹಾಂಗ್ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಸತತ ಎರಡನೇ ಸೋಲು ಅನುಭವಿಸಿದ್ದು, ಮುಂದಿನ ಪಂದ್ಯಗಳಲ್ಲಿ ಗೆಲುವಿನ ಹಾದಿಗೆ ಮರಳುವ ಸವಾಲು ಎದುರಾಗಿದೆ.
ಉಭಯ ತಂಡಗಳ ಆಟಗಾರರು
ಯುಎಇ: ಖಾಲಿದ್ ಶಾ (ನಾಯಕ), ಅನ್ಶ್ ಟಂಡನ್, ಮುಹಮ್ಮದ್ ಝುಹೈಬ್, ಮುಹಮ್ಮದ್ ಫಾರೂಕ್, ಮೊಹಮ್ಮದ್ ಫರಾಝುದ್ದೀನ್, ಝಾಹಿದ್ ಅಲಿ, ಮರೂಫ್ ಮರ್ಚೆಂಟ್.
ಭಾರತ: ಕೃನಾಲ್ ಪಾಂಡ್ಯ (ನಾಯಕ), ರಾಹುಲ್ ತ್ರಿಪಾಠಿ (ವಿಕೆಟ್ ಕೀಪರ್), ನಿತೀಶ್ ರಾಣಾ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ಟಿ. ನಟರಾಜನ್, ಕುಲ್ವಂತ್ ಖೇಜ್ರೋಲಿಯಾ.









