ಬೆಂಗಳೂರು: ಕನ್ನಡ ರಾಜ್ಯೋತ್ಸವದ ಮುನ್ನಾದಿನವೇ ಬೆಂಗಳೂರಿನಲ್ಲಿ ಸ್ಫೋಟಕದಂತೆ ಕಾಣುವ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಣೆಹಳ್ಳಿ ಸರ್ಕಲ್ ಸಮೀಪದ ಖಾಲಿ ಜಾಗದಲ್ಲಿ ಈ ವಸ್ತು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜ್ಞಾನಭಾರತಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸೋಣೆಹಳ್ಳಿ ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಬಾಂಬ್ ಮಾದರಿಯ ವಸ್ತು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಂಡಿದ್ದಾರೆ. ಅನುಮಾನಾಸ್ಪದ ವಸ್ತುವಿನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ವಸ್ತು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ವಸ್ತುವಿನ ಸ್ವರೂಪ ಹಾಗೂ ಅದು ಖಾಲಿ ಜಾಗಕ್ಕೆ ಹೇಗೆ ಬಂತು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸುತ್ತಿದ್ದಾರೆ. ಅದು ನಿಜವಾಗಿಯೂ ಸ್ಫೋಟಕ ವಸ್ತುವೇ ಅಥವಾ ಬೇರೆ ಯಾವುದಾದರೂ ವಸ್ತುವೇ ಎಂಬುದು ತಾಂತ್ರಿಕ ಪರಿಶೀಲನೆಯ ಬಳಿಕವಷ್ಟೇ ದೃಢಪಡಬೇಕಿದೆ.
ಸದ್ಯ ಜ್ಞಾನಭಾರತಿ ಪೊಲೀಸರು ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದು, ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.









