ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದ ಕುಟುಂಬಕ್ಕೆ ಮಾಂಸಾಹಾರ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರೂ ಚಿಕನ್ ಬಿರಿಯಾನಿ ನೀಡಲಾಗಿದ್ದು,
ಕುಟುಂಬದ ಮಕ್ಕಳು ಸೇರಿದಂತೆ ಸದಸ್ಯರು ಅರಿವಿಲ್ಲದೆ ಮಾಂಸಾಹಾರ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಗೇಟ್ ಸಂಖ್ಯೆ 16 ಮತ್ತು 17ರ ಸಮೀಪವಿರುವ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ವಿರುದ್ಧ ಈ ಆರೋಪ ಕೇಳಿಬಂದಿದೆ.
ಪಿಯೂಷ್ ಅಗರ್ವಾಲ್ ಎಂಬುವವರು ತಮ್ಮ ಕುಟುಂಬದೊಂದಿಗೆ ರೆಸ್ಟೋರೆಂಟ್ಗೆ ತೆರಳಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ರೆಸ್ಟೋರೆಂಟ್ ನೀಡಿದ ಬಿಲ್ನಲ್ಲಿಯೂ ವೆಜ್ ಬಿರಿಯಾನಿ ಎಂದೇ ನಮೂದಿಸಲಾಗಿತ್ತು. ಆದರೆ ಕುಟುಂಬಕ್ಕೆ ನೀಡಿದ ಆಹಾರದಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ ಎಂದು ಪಿಯೂಷ್ ಆರೋಪಿಸಿದ್ದಾರೆ.
ಸಂಪೂರ್ಣ ಸಸ್ಯಾಹಾರಿಗಳಾಗಿರುವ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಆಹಾರದಲ್ಲಿ ಮಾಂಸ ಇರುವುದನ್ನು ಗಮನಿಸದೆ ಸೇವಿಸಿದ್ದಾರೆ ಎನ್ನಲಾಗಿದೆ. ಬಳಿಕ ಬಿರಿಯಾನಿಯಲ್ಲಿ ಚಿಕನ್ ತುಂಡುಗಳು ಇರುವುದನ್ನು ಗಮನಿಸಿದ ಕುಟುಂಬಸ್ಥರು ರೆಸ್ಟೋರೆಂಟ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಹಾರದಲ್ಲಿ ಚಿಕನ್ ಇರುವುದನ್ನು ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಶೆಫ್ ಒಪ್ಪಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದರೂ ಮಾಂಸಾಹಾರ ನೀಡಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪಿಯೂಷ್ ಅಗರ್ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಇಂತಹ ನಿರ್ಲಕ್ಷ್ಯ ನಡೆಯುವುದು ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಕುರಿತು ಪಿಯೂಷ್ ಅಗರ್ವಾಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್ ನೀಡಿರುವ ಬಿಲ್ ಹಾಗೂ ಸಿಬ್ಬಂದಿಯೊಂದಿಗೆ ನಡೆದ ಸಂಭಾಷಣೆಯ ವಿಡಿಯೋವನ್ನು ಪ್ರಕಟಿಸಿ, ಆಹಾರ ಪೂರೈಕೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಸಸ್ಯಾಹಾರಿ ಎಂದು ನಮೂದಿಸಿರುವ ಆಹಾರದಲ್ಲಿ ಮಾಂಸಾಹಾರ ಪತ್ತೆಯಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ರೆಸ್ಟೋರೆಂಟ್ನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆಹಾರದ ಆರ್ಡರ್ ದಾಖಲೆಗಳನ್ನು ಪರಿಶೀಲಿಸಿ ಘಟನೆಯ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಇಂತಹ ಘಟನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಆಡಳಿತದ ಗಮನ ಸೆಳೆದಿರುವ ಪಿಯೂಷ್ ಅಗರ್ವಾಲ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.









