ಮಂಡ್ಯ: ಸ್ನೇಹಿತರೊಂದಿಗೆ ವರುಣ ನಾಲೆಯಲ್ಲಿ ಈಜಲು ತೆರಳಿದ್ದ ಮೈಸೂರಿನ ಖಾಸಗಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನ ರಭಸಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರ ಪೈಕಿ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ವಿದ್ಯಾರ್ಥಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗೊಳ ಪಂಪ್ಲೈನ್ ರಸ್ತೆಯ ವರುಣ ನಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಇ. ವ್ಯಾಸಂಗ ಮಾಡುತ್ತಿದ್ದ ಪಾರ್ಥಸಾರಥಿ ಮತ್ತು ಅರ್ಜುನ್ ನೀರಿನಲ್ಲಿ ನಾಪತ್ತೆಯಾದ ವಿದ್ಯಾರ್ಥಿಗಳು.
ಶುಕ್ರವಾರ ಪಾರ್ಥಸಾರಥಿ ಮತ್ತು ಅರ್ಜುನ್ ತಮ್ಮ ಸ್ನೇಹಿತರೊಂದಿಗೆ ವರುಣ ನಾಲೆಗೆ ಈಜಲು ತೆರಳಿದ್ದರು. ಈ ವೇಳೆ ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಇಬ್ಬರೂ ಈಜಲು ನೀರಿಗೆ ಇಳಿದಿದ್ದಾರೆ. ಆದರೆ ನೀರಿನ ರಭಸಕ್ಕೆ ಸಿಲುಕಿದ ವಿದ್ಯಾರ್ಥಿಗಳು ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.
ಘಟನೆಯನ್ನು ಕಂಡು ಆತಂಕಗೊಂಡ ಉಳಿದ ಸ್ನೇಹಿತರು ಕೂಡಲೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ತುರ್ತು ರಕ್ಷಣಾ ತಂಡದವರು ನಾಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ನಿರಂತರ ಶೋಧ ಕಾರ್ಯದ ಬಳಿಕ ಇಂದು ಅರ್ಜುನ್ ಅವರ ಮೃತದೇಹವನ್ನು ನಾಲೆಯಿಂದ ಹೊರತೆಗೆಯಲಾಗಿದೆ. ಆದರೆ ಮತ್ತೊಬ್ಬ ವಿದ್ಯಾರ್ಥಿ ಪಾರ್ಥಸಾರಥಿ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈಜಲು ತೆರಳಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ಮೃತಪಟ್ಟಿರುವುದು ಹಾಗೂ ಮತ್ತೊಬ್ಬ ನಾಪತ್ತೆಯಾಗಿರುವುದು ಕುಟುಂಬಸ್ಥರು ಮತ್ತು ಸ್ನೇಹಿತರಲ್ಲಿ ಆತಂಕ ಹಾಗೂ ದುಃಖಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.









