HomeArt and Literatureಮಹಾ ಕ್ರಿಯಾಶಕ್ತಿ ಪಂ. ಡಾ. ಪುಟ್ಟರಾಜ ಗವಾಯಿಗಳು

ಮಹಾ ಕ್ರಿಯಾಶಕ್ತಿ ಪಂ. ಡಾ. ಪುಟ್ಟರಾಜ ಗವಾಯಿಗಳು

For Dai;y Updates Join Our whatsapp Group

Spread the love

ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯರ ಸಾಧಕರಲ್ಲಿ ಪಂ. ಡಾ. ಪುಟ್ಟರಾಜ ಗವಾಯಿಗಳವರು ಪ್ರಮುಖರು. ಕವಿಗಳಾಗಿ, ಸಂಗೀತಗಾರರಾಗಿ, ತ್ರಿಭಾಷಾ ಪಂಡಿತರಾಗಿ, ಕೀರ್ತನಕಾರರಾಗಿ ಅಕ್ಷರಲೋಕವನ್ನು ತಮ್ಮ ಸಾಹಿತ್ಯ ಕೃತಿಗಳಿಂದ ಅಕ್ಷಯ ಲೋಕವನ್ನಾಗಿಸಿದ ಮಹಾ ಕ್ರಿಯಾಶಕ್ತಿ ಪಂ. ಡಾ. ಪುಟ್ಟರಾಜ ಗವಾಯಿಗಳವರು.

ಕರ್ನಾಟಕ ಹಾಗೂ ಹಿಂದೂಸ್ತಾನಿ ಉಭಯ ಸಂಗೀತ ವಿದ್ಯೆಗಳನ್ನು ತಮ್ಮ ಸಂಚಾರಿ ಪಾಠಶಾಲೆಯ ಮುಖೇನ ನೂರಾರು ಕಲಾವಿದರನ್ನು ನಾಡಿಗೆ ಕಾಣಿಕೆಯಾಗಿ ನೀಡಿದ ಮಹಾ ಕಾರ್ಯದ ರೂವಾರಿಗಳು. ಪುಟ್ಟರಾಜ ಗವಾಯಿಗಳು 1944ರಲ್ಲಿ ಗದಗಿನಲ್ಲಿ ಶ್ರೀವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸುವುದರ ಮೂಲಕ ಅಂಧ, ಅನಾಥ, ಬಡ ಮಕ್ಕಳ ಬದುಕಿನಲ್ಲಿ ಭರವಸೆಯಿಂದ ಬದುಕುವಂತೆ ಆತ್ಮಬಲವನ್ನು ತುಂಬಿದರು. ವೀರೇಶ್ವರ ಪುಣ್ಯಾಶ್ರಮವನ್ನು ಅಂತಾರಾಷ್ಟ್ರೀಯ ಮಟ್ಟದ ಸಂಗೀತ ವಿಶ್ವವಿದ್ಯಾಲಯವನ್ನಾಗಿ ರೂಪಿಸಿದವರು.

ಗವಾಯಿಗಳು ಶಿಖರಪ್ರಾಯರಾದ ಡಾ. ಪುಟ್ಟರಾಜ ಗವಾಯಿಗಳು ಬಹುಮುಖಿ ವ್ಯಕ್ತಿತ್ವದೊಂದಿಗೆ ಸಾಹಿತ್ಯ, ವೃತ್ತಿ ರಂಗಭೂಮಿ, ಸಂಗೀತ, ಸಾಮಾಜಿಕ ಸೇವೆ, ಶೈಕ್ಷಣಿಕ ಪ್ರಸಾರಗಳ ಮೂಲಕ ಬದುಕು ಬರಹವನ್ನು ರೂಢಿಸಿಕೊಂಡವರು. ಪುಟ್ಟರಾಜರ ಬದುಕು-ಬರಹಕ್ಕಿಂತಲೂ ಹಿರಿದಾದುದು ಅವರ ಸಾಧನೆ.

ದಿ. 03-03-1914ರಲ್ಲಿ ಜನಿಸಿದ ಡಾ. ಪುಟ್ಟರಾಜ ಗವಾಯಿಗಳವರ ಮೂಲ ಹೆಸರು ಚೆನ್ನಬಸಯ್ಯ. ಗವಾಯಿಗಳವರ ತಾಯಿಯ ತವರು ಮನೆ ಹಾವೇರಿ ಹತ್ತಿರದ ದೇವಗಿರಿ ಗ್ರಾಮ. ಪುಟ್ಟಯ್ಯ ಜನ್ಮಾಂಧರನಾಗಿರಲಿಲ್ಲ. ಕಣ್ಣು ಬೇನೆಯ ಕಾರಣವಾಗಿ ನಾಟಿ ವೈದ್ಯರ ಸಲಹೆ ಮೇರೆಗೆ ಚಿಕ್ಕ ಬಾಲಕನೆಳೆಯ ಕಣ್ಣುಗಳಿಗೆ ತೊನಸಿಗಳನ್ನು ಮುಟ್ಟಿಸುವ ಸಂದರ್ಭದಲ್ಲಿ ತೊನಸಿಗಳು ಕೈ ಜಾರಿ ಕಣ್ಣುಗಳಲ್ಲಿ ಬಿದ್ದು ಕಣ್ಣು ಗುಡ್ಡೆಗಳನ್ನು ತಿಂದು ಹಾಕಿದುದಕ್ಕಾಗಿ ಪುಟ್ಟಯ್ಯನಾಗ ಕುರಡನಾಗಬೇಕಾದ ಪ್ರಸಂಗವನ್ನು ತಿಳಿಸಿದ್ದಾರೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಎಂಟು ವರ್ಷದ ಮಗನೊಂದಿಗೆ 1922ರಲ್ಲಿ ದೇವರಹೊಸಪೇಟೆಯಿಂದ ದೇವಗಿರಿಗೆ ಬಂದು ತನ್ನ ಸಹೋದರನಾದ ಚಂದ್ರಶೇಖರ ಅವರಲ್ಲಿ ಉಳಿದುಕೊಳ್ಳುತ್ತಾರೆ.
ಸೋದರ ಮಾವನಾದ ಚಂದ್ರಶೇಖರಯ್ಯನವರು ಪಂಚಾಕ್ಷರ ಗವಾಯಿಗಳವರ ಶಿಷ್ಯರು. ಅಳಿಯ ಪುಟ್ಟಯ್ಯನನ್ನು ಸಂಗೀತಗಾರನನ್ನಾಗಿ ರೂಪಿಸುವ ಮಹಾದಾಸೆಯ ಸಂಕಲ್ಪದಿಂದ ಪಂಚಾಕ್ಷರ ಗವಾಯಿಗಳಲ್ಲಿ ಕರೆ ತರುತ್ತಾರೆ. ಈ ಸಂದರ್ಭದಲ್ಲಿ ಪಂಚಾಕ್ಷರ ಗವಾಯಿಗಳವರ ಪಾಠಶಾಲೆಯು ನವಲಗುಂದದ ಗವಿಮಠದಲ್ಲಿ ವಾಸ್ತವ್ಯವನ್ನು ಹೊಂದಿಕೊಂಡಿದ್ದು, ಅಳಿಯನಾದ ಪುಟ್ಟಯ್ಯನನ್ನು ಪಂಚಾಕ್ಷರ ಗವಾಯಿಗಳಲ್ಲಿ ಸಂಗೀತ ವಿದ್ಯೆಯನ್ನು ಕಲಿಸುವುದಕ್ಕಾಗಿ ಸಂಚಾರಿ ಪಾಠಶಾಲೆಗೆ ಸೇರಿಸುತ್ತಾರೆ. ಪಂಚಾಕ್ಷರ ಗವಾಯಿಗಳ ಸಂಚಾರಿ ಸಂಗೀತ ಪಾಠಶಾಲೆಯನ್ನು ಸೇರಿದ ಪುಟ್ಟಯ್ಯನಿಗೆ ಸಂಗೀತ, ಸಾಹಿತ್ಯ, ಶಾಸ್ತ್ರ, ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿದ ಬೇರೆ ಬೇರೆ ಶಿಕ್ಷಕರನ್ನು, ವಿದ್ಯಾಭ್ಯಾಸ ಪರಿಣಿತರನ್ನು, ಬೇರೆ ಬೇರೆ ಕಲಾವಿದರನ್ನು ಕರೆಯಿಸಿ ಪಾಠಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಂಗೀತ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟವರು ಪಂಚಾಕ್ಷರ ಗವಾಯಿಗಳವರು.

ಗವಾಯಿಗಳವರು ಪುಟ್ಟಯ್ಯನವರಿಗೆ ಸಾಹಿತ್ಯ ವ್ಯಾಕರಣ, ಛಂದಸ್ಸು, ಅಲಂಕಾರ, ಚರಿತ್ರೆಯ ವಿಷಯಗಳನ್ನು ಅಧ್ಯಯನ ಮಾಡಿಸಿಕೊಟ್ಟರು.ತನಗೆ ದೊರಕಿದ ಗುರು ಪರಂಪರೆಯ ಸದುಪಯೋಗವನ್ನು ಪಡೆದುಕೊಂಡ ಪುಟ್ಟಯ್ಯ ಪಂಚಾಕ್ಷರ ಗವಾಯಿಗಳ ಶಿಷ್ಯನಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಹಾಸಂಗೀತಗಾರರಾಗಿ ರೂಪಗೊಂಡರು.

1922ರಲ್ಲಿ ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆಯನ್ನು ಸೇರಿದ ಪುಟ್ಟರಾಜರು ಸಂಗೀತ ವಿದ್ಯೆಯನ್ನು ಪಡೆಯುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದರು. ನಾಡಿನ ತುಂಬೆಲ್ಲಾ ಸಂಚಾರಿ ಪಾಠಶಾಲೆಯನ್ನು ತೆಗೆದುಕೊಂಡು ಸಂಚರಿಸಿದರು. ಸಂಚಾರಿ ಪಾಠಶಾಲೆಯಲ್ಲಿರುವ ವಿದ್ಯಾರ್ಥಿಗಳ ಊಟ ವಸತಿಯ ಜವಾಬ್ದಾರಿಯನ್ನು ಹೊತ್ತುಕೊಂಡು ನಾಡಿನ ಬೇರೆ ಬೇರೆ ಊರುಗಳಲ್ಲಿ ಕ್ಯಾಂಪ್ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಸಂಗೀತ ಪಾಠಶಾಲೆಯನ್ನು ನಡೆಸಲು ಆರ್ಥಿಕ ತೊಂದರೆಯನ್ನು ಪಂಚಾಕ್ಷರ ಗವಾಯಿಗಳು ಎದುರಿಸಬೇಕಾಗಿ ಬಂದಿತು.

ಈ ಸಂದರ್ಭದಲ್ಲಿ ಪುಟ್ಟರಾಜರು ಸೂಕ್ಷ್ಮವಾಗಿ ವಿಚಾರಿಸಿಕೊಂಡು ಗುರುಗಳ ಸಹಾಯಕ್ಕೆ ಮಾಡಿದ ವಿಚಾರ ಅತ್ಯಂತ ಮಹತ್ವದ ಸಂಗತಿಯನ್ನು ದಾಖಲು ಮಾಡಲಾಗಿದೆ. ಯುಗದ ಸಂಚಾರಿ ಪಾಠಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ನಾಟ್ಯ ಕಲೆಯನ್ನು ತರಬೇತಿ ಕೊಡುವುದರೊಂದಿಗೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಕಂಪನಿಯನ್ನು ಪ್ರಾರಂಭಿಸಿದರು. ಸಾಲದ ಹೊರೆ ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಿಸುವ ಸಂದರ್ಭದಲ್ಲಿ 1938-39 ರಲ್ಲಿ ಪಂ. ಪುಟ್ಟರಾಜ ಗವಾಯಿಗಳವರು ಸೊನ್ನಲಗಿ ಶ್ರೀ ಸಿದ್ದರಾಮೇಶ್ವರ’ ನಾಟಕವನ್ನು ಬರೆದು ನರಗುಂದದಲ್ಲಿ ನಾಟಕ ಪ್ರಾರಂಭವಾಗಿ ಅದ್ಭುತ ಪ್ರದರ್ಶನ ಕಂಡು ತಕ್ಕಮಟ್ಟಿಗೆ ಸಾಲದ ಹೊರೆ ಕಡಿಮೆಯಾಯಿತು. 1944ರಲ್ಲಿ ಪಂಚಾಕ್ಷರ ಗವಾಯಿಗಳು ಲಿಂಗೈಕ್ಯರಾದ ಬಳಿಕ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಧಿಕಾರವನ್ನು ವಹಿಸಿಕೊಂಡು ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮವನ್ನು ಸಂಗೀತ ಕ್ಷೇತ್ರದ ಮಹಾಸಂಸ್ಥೆಯಾಗಿ ಬೆಳೆಸಿದರು. 21ನೇ ಶತಮಾನದಲ್ಲೂ ಡಾ. ಪುಟ್ಟರಾಜ ಗವಾಯಿಗಳ ವೀರಶೈವ ಪುರಾಣ ಪರಂಪರೆಯನ್ನು ತಮ್ಮ ಪುರಾಣ ಕೃತಿಗಳ ಮೂಲಕವಾಗಿ ಮುಂದುವರೆಸಿಕೊಂಡು ಬರುವುದರೊಂದಿಗೆ ಷಟ್ಟದಿ, ಛಂದಸ್ಸಿನಲ್ಲಿ ತಮ್ಮ ಕೃತಿಗಳ ಛಂದೋಪ್ರಕಾರಕ್ಕನುಗುಣವಾಗಿ ಕಾವ್ಯಗಳನ್ನು ರಚಿಸಿದ್ದಾರೆ. ಭಾಮಿನಿ ಷಟ್ಟದಿ, ವಾರ್ಧಕ ಷಟ್ಟದಿಗಳನ್ನು ಪುರಾಣ ಕೃತಿಗಳ ಬರವಣಿಗೆಗೆ ಬಳಸಿಕೊಂಡಿದ್ದಾರೆ. ಪಂಡಿತ ಪಂಚಾಕ್ಷರ ಗವಾಯಿಗಳ ಶಿಕ್ಷಣ ಸಮಿತಿಯ ಅಡಿಯಲ್ಲಿ ಶಿಶುಮಂದಿರದಿಂದ ಪ್ರಾರಂಭಗೊಂಡ ಪದವಿ ಮಹಾವಿದ್ಯಾಲಯದ ಹಾಗೂ ಸ್ನಾತಕೋತ್ತರ ಉನ್ನತ ಶೈಕ್ಷಣಿಕ ಹಂತದವರೆಗೆ ಸಂಸ್ಥೆಗಳನ್ನು ಪ್ರಾರಂಭಿಸಿದ ನಂತರ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಕೆಯ ಮೂಲಕ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿ ರೂಪಕೊಟ್ಟವರು ಪುಟ್ಟರಾಜ ಗವಾಯಿಗಳು. ಲೋಕ ಕಲ್ಯಾಣಕ್ಕಾಗಿ ಪುಟ್ಟರಾಜರು ಮಾಡಿದ ಪ್ರಯತ್ನದ ಫಲವಾಗಿ ಇಂದು ಹಲವಾರು ಬಡಮಕ್ಕಳ ಬಡವಾಗುತ್ತಿದ್ದ ಬದುಕು ಚಿಗುರೊಡೆದು ಘಮಘಮಿಸುವ ನಂದನವಾಗಿದೆ. ಡಾ. ಪುಟ್ಟರಾಜ ಗವಾಯಿಗಳ ಜೀವಿತಾವಧಿಯಲ್ಲಿ ಅವರಿಗೆ ಅರ್ಪಿಸಲಾದ ತುಲಾಭಾರಗಳು, ವಿಶ್ವದಲ್ಲಿಯೇ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ. ಗಾನಯೋಗಿ ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಹಾಗೂ ಶಿಷ್ಯ ಬಳಗದವರು ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ಅಜರಾಮರವಾಗಿಸಲು ಕಳೆದ 14 ವರ್ಷಗಳಿಂದ ಸಂಗೀತ, ಸಾಹಿತ್ಯ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಶಿವಯೋಗಿ ಶ್ರೀ ಪುಟ್ಟರಾಜ’ ಪ್ರಶಸ್ತಿ ಹಾಗೂ ನಗದು ಕಾಣಿಕೆ ನೀಡಿ ಗೌರವಿಸುತ್ತ ಬಂದಿದೆ.

2025-26ನೇ ಸಾಲಿನಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಪ್ಪಳದ ಪಂ. ಸದಾಶಿವ ಪಾಟೀಲ (ಸಂಗೀತ), ಗದುಗಿನ ಪಂ. ವಿರೇಶ ಕಿತ್ತೂರ (ಸಂಗೀತ) ಹಾಗೂ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳವರಿಗೆ ಇದೇ ಸೆ. 14ರಂದು ಸಂಜೆ 6.30 ಗಂಟೆಗೆ ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿ ಗ್ರಾಮದ ಶ್ರೀ ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿಯ ಅಡಿಯಲ್ಲಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ `ಶಿವಯೋಗಿ ಶ್ರೀ ಪುಟ್ಟರಾಜ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಡಾ. ಶರಣಬಸವ ವೆಂಕಟಾಪೂರು.
ನಿವೃತ್ತ ಪ್ರಾಧ್ಯಾಪಕರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!