ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ವೈಟ್ ಫೀಲ್ಡ್ ನಲ್ಲಿರುವ ಕೋ ಲಿವಿಂಗ್ ಪಿಜಿ ನಲ್ಲಿ ನಡೆದಿದೆ. ಬಾಬು ಚಾಕು ಇರಿದ ಆರೋಪಿಯಾಗಿದ್ದು, ಒಂದೇ ಪಿಜಿ ನಲ್ಲಿ ಯುವತಿ ಹಾಗೂ ಬಾಬು ವಾಸವಿದ್ದರು. ಇಂಜಿನಿಯರ್ ಆಗಿರುವ ಆಸಾಮಿಗೆ ಮುದುವೆಯಾಗಿ ಮಗು ಇದೆ.
ಒಬ್ಬನೇ ಬಂದು ಪಿಜಿ ನಲ್ಲಿ ವಾಸವಿದ್ದ ಆರೋಪಿ ಬಾಬು, ಎರಡು ತಿಂಗಳ ಹಿಂದೆ ಅದೇ ಪಿಜಿ ನಲ್ಲಿ ವಾಸವಿದ್ದ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ. ನಂಬರ್ ಪಡೆದುಕೊಂಡು ಯುವಕ,ಯುವತಿ ಸಂಪರ್ಕದಲ್ಲಿದ್ದರು. ಕಳೆದ ಮೂರು ದಿನದ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ, ಆಕೆಯ ಖಾಸಗಿ ಫೋಟೊ ಇಟ್ಟುಕೊಂಡು 70 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಬಳಿ ಸಾಲ ಮಾಡಿ ಕೊಡುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ಆಕೆಯ ಮೊಬೈಲ್ ಪಡೆದು 14 ಸಾವಿರ ರೂ. ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಗಲಾಟೆ ಮಾಡಿ ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಾಯಾಳು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.



