ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಕುರುಬರ ಸಂಘದ ರಜತ ಮಹೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯ ಮಟ್ಟದ ಕನಕೋತ್ಸವ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರು ಅವರ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾಗತಕ್ಕೆ ಕನಕ ಭವನದ ರಾಕೇಶ್ ಸಿದ್ದರಾಮಯ್ಯ ಸಭಾಂಗಣದಲ್ಲಿ ಭರದ ಸಿದ್ಧತೆ ನಡೆದಿದೆ.
ನಗರದ ಕನಕ ಭವನದಲ್ಲಿ ಈಗಾಗಲೇ ಬೃಹತ್ ವೇದಿಕೆ ಸಿದ್ಧವಾಗಿದೆ. ಸುಮಾರು 10 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಬೃಹತ್ ಅಳತೆಯ ಬ್ಯಾನರ್‌ಗಳನ್ನು ವೇದಿಕೆ ಮುಂಭಾಗದಲ್ಲಿ ಹಾಕಲಾಗಿದೆ. ಅಂತೆಯೇ, ಅವಳಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರುವ ಹಲವಾರು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ವಿವಿಧ ಸಮಾಜದ ನಾಯಕರ ಹಾಗೂ ಕುರುಬ ಸಮಾಜದ ಮುಖಂಡರಿಂದ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿದೆ.
ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ನಗರಸಭೆ ಸಹಯೋಗದಲ್ಲಿ ಅವಳಿ ನಗರದ ವಿವಿಧ ಭಾಗಗಳಲ್ಲಿರುವ ಕಸವನ್ನು ನಗರಸಭೆಯ ಸಿಬ್ಬಂದಿಗಳಿಂದ ಸ್ವಚ್ಛಗೊಳಿಸಲಾಗಿದೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಎಲ್ಲೆಡೆ ಸಿದ್ಧತೆ ನಡೆಸಲಾಗಿದೆ.
ತಾಲೂಕು ಕುರುಬರ ಸಂಘದ ರಜತ ಮಹೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯ ಮಟ್ಟದ ಕನಕೋತ್ಸವ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರು ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮ ಸೆ. 20ರಂದು ಬೆಳಿಗ್ಗೆ 11ಕ್ಕೆ ಕನಕ ಭವನದ ರಾಕೇಶ್ ಸಿದ್ದರಾಮಯ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಬಿಡುಗಡೆ ಮಾಡುವರು. ನಾಮಫಲಕ ಅನಾವರಣವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರು ವಹಿಸುವರು.
ನಿರಂತರವಾಗಿ ಸುರಿದ ಮಳೆಯಿಂದ ನಗರದ ವಿವಿಧ ಭಾಗಗಳಲ್ಲಿ ರಸ್ತೆಗಳು ಗುಂಡಿಗಳಿಂದ ಕೂಡಿತ್ತು. ನಗರದ ವಿವಿಧ ಭಾಗಗಳಲ್ಲಿರುವ ಗುಂಡಿ ಮುಚ್ಚುವ ಕೆಲಸ ಭರದಿಂದ ಸಾಗಿದೆ. ಪ್ರಮುಖ ವೃತ್ತದಲ್ಲಿರುವ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ ನೀಡುವ ಮೂಲಕ ವಾಹನ ಸವಾರರು ಸುಗಮವಾಗಿ ಓಡಾಡಲು ಅನುಕೂಲವಾಗಲಿದೆ.



