ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಕೂಡಲಸಂಗಮ ಪೀಠಕ್ಕೆ ಬಿತ್ತು ಬೀಗ, ಬೇಸರದಲ್ಲಿ ಶ್ರೀಗಳು ಹೇಳಿದ್ದೇನು?

0
Spread the love

ಬಾಗಲಕೋಟೆ:- ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

Advertisement

ಕಳೆದ ಕೆಲ ದಿನಗಳಿಂದ ಸ್ವಾಮೀಜಿ ಮತ್ತು ಕಾಶಪ್ಪನವರ ನಡುವೆ ನಡೆಯುತ್ತಿದ್ದ ವಿವಾದ ಇದೀಗ ಸ್ವಾಮೀಜಿಯನ್ನು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿಯಿಂದ ಉಚ್ಚಾಟನೆ ಹಂತಕ್ಕೆ ಬಂದುನಿಂತಿದೆ. ಇನ್ನು ಸ್ವಾಮೀಜಿ ಉಚ್ಛಾಟನೆ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದೆ.

ಸ್ವಾಮೀಜಿ ಉಚ್ಚಾಟನೆ ಬಗ್ಗೆ ತೀರ್ಮಾನ;

ಭಾನುವಾರ ನಡೆದ ಸಮುದಾಯದ ಮುಖಂಡರ ಕಾರ್ಯಕಾರಿಣಿ ಸಭೆಯಲ್ಲಿ ಸ್ವಾಮೀಜಿ ಉಚ್ಚಾಟನೆ ತೀರ್ಮಾನ ಮಾಡಲಾಗಿದ್ದು, ಅಕ್ರಮ ಆಸ್ತಿ ಗಳಿಕೆ, ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಆರೋಪ ಮಾಡಲಾಗಿದೆ. ಅವ್ರು ಆಕ್ಟಿವ್ ಇರಲಿಲ್ಲ, ಸನ್ಯಾಸಿಗೆ ಇರುವಂತಹ ಮೂಲಭೂತ ಲಕ್ಷಣ ಕಡಿಮೆ ಆಗಿವೆ. ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಕಂಪ್ಲೆಂಟ್ ಇದ್ದವು. ಟ್ರಸ್ಟ್ ಮಾತು ಕೇಳುತ್ತಿರಲಿಲ್ಲ..ಅವ್ರದು ದೊಡ್ಡ ಫೈಲೇ ಇದೆ ಅಂತ ನೀಲಕಂಠ ಅಸೂಟಿ ಹೇಳಿದ್ದಾರೆ.

ಟ್ರಸ್ಟ್‌ನ 30 ಜನರ ಒಮ್ಮತದ ನಿರ್ಣಯದ ಮೇರೆಗೆ ಉಚ್ಚಾಟನೆ ಮಾಡಲಾಗಿದೆ. ಅವ್ರಿಗೆ ಕಾರು ಸೇರಿ ಎಲ್ಲವನ್ನೂ ಕೊಡಿಸಿದ್ದೇವೆ. ಆದರೆ ಸ್ವಾಮೀಜಿ ಬಸವತತ್ವಕ್ಕೆ ವಿರುದ್ಧ ಮಾಡಿದ್ದಾರೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ ಅಂತ ಅಸೂಟಿ ಹೇಳಿದ್ರು.

ಉಚ್ಚಾಟನೆಗೆ ಜಯಮೃತ್ಯುಂಜಯ ಶ್ರೀ ಬೇಸರ;

ಉಚ್ಚಾಟನೆಯ ವಿಷಯ ತಿಳಿಯುತ್ತಿದ್ದಂತೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ವಾಮೀಜಿ ಉಚ್ಚಾಟನೆ ವಿಷಯ ತಿಳಿಯುತ್ತಿದ್ದಂತೆ ಶ್ರೀಗಳ ಧ್ವನಿಯಲ್ಲಿ ಹತಾಶೆ ಭಾವ ಮೂಡಿತ್ತು. ಬದಲಾವಣೆ ಬಯಸಿದಂತಹ ವ್ಯಕ್ತಿಗಳಿಗೆ ತೊಂದರೆ ಕೊಡುವುದು ಸಹಜ. ಅದು ಯಾರನ್ನೂ ಬಿಟ್ಟಿಲ್ಲ. ಬಸವಣ್ಣನವರನ್ನು ಬಿಟ್ಟಿಲ್ಲ, ಅಂಬೇಡ್ಕರ್‌ರವರನ್ನು ಸಹ ಬಿಟ್ಟಿಲ್ಲ ಎಂದಿದ್ದಾರೆ.

ನಮ್ಮ ಗುರಿ, ನಿಷ್ಠೆ ಮಾತ್ರ ಅಚಲವಾಗಿರುವಂತದ್ದು. ಎಲ್ಲರೂ ಸೇರಿಕೊಂಡು ಬಸವ ಸಂಪ್ರದಾಯ ಉಳಿಸಬೇಕು. ಶರಣ ಸಮಾಜವನ್ನು ಕಟ್ಟೋಣ ಎಂದ ಶ್ರೀಗಳು ಕರೆ ನೀಡಿದರು.

ಸ್ವಾಮೀಜಿ ಉಚ್ಚಾಟನೆ ಬಗ್ಗೆ ವಿಜಯಾನಂದ ಕಾಶಪ್ಪನವರ್ ಏನಂದ್ರೂ?

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ನಮ್ಮ ಎಲ್ಲ ಧರ್ಮದರ್ಶಿಗಳು, ಸಮುದಾಯದವರು ಸೇರಿ ಒಂದು ತತ್ವ ಆದರ್ಶದ ಮೇಲೆ ಈ ಪೀಠವನ್ನು ಕಟ್ಟಲಾಗಿತ್ತು. ಇವತ್ತಿನವರೆಗೂ ನಾವು ಬಸವತತ್ವದ ಮೇಲೆ ನಡೆದುಕೊಂಡು ಬಂದಿದ್ದೆವು. ಬಸವಣ್ಣನವರ ಐಕ್ಯ ಭೂಮಿಯಲ್ಲಿ ನಾವು ಮಠವನ್ನು ಮಾಡಿದ್ದೇವೆ. ಇದನ್ನು ಮಾಡುವಂತಹ ಸಮಯದಲ್ಲಿ ಇಲ್ಲಿ ಬಸವಣ್ಣನವರ ತತ್ವದಂತೆಯೇ ನಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಈ ಪೀಠದಲ್ಲಿ ಕೂರಿಸಿದ್ದೆವು. ಆದರೆ, ಅವರು ಟ್ರಸ್ಟ್​ನವರ ಮಾತನ್ನು ಕೇಳದೆ, ತಪ್ಪು ಹೆಜ್ಜೆ ಇಡುತ್ತಾ ಬರುತ್ತಿದ್ದಾರೆ ಎಂದಿದ್ದಾರೆ.

ಹಲವು ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬಂದಿದ್ದಾರೆ. ಇದನ್ನು ಗಮನಿಸಿ ಅವರಿಗೆ ಹಲವು ಬಾರಿ ನೋಟಿಸ್ ಕೊಟ್ಟಿದ್ದಾರೆ. ಅವರ ಬಳಿ ಉತ್ತರವನ್ನೂ ಪಡೆದಿದ್ದಾರೆ. ನಮ್ಮ ಬಳಿ ಉತ್ತರವೂ ಇವೆ. ಅವರು ಸರಿಯಾಗಿ ನಡೆದುಕೊಂಡು ಹೋಗುತ್ತೇನೆ ಎಂದು ಉತ್ತರವನ್ನೂ ಬರೆದಿದ್ದಾರೆ. ಪದೇ ಪದೇ ನಾವು ಇದನ್ನೇ ನೋಡುವುದಾಯಿತು. ನಮ್ಮ ವಿರುದ್ದವೂ ಆರೋಪ ಮಾಡಿದ್ರು. ನಾನು ಅಧ್ಯಕ್ಷನಾದ ಮೇಲೆ ನನ್ನ ವಿರೋಧಿಗಳ ಗುಂಪನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಹೋದ್ರು. ಇವತ್ತು ರಾಜಕಾರಣವನ್ನೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇವತ್ತು ಬಸವತತ್ವವನ್ನು ಮರೆತು, ಲಿಂಗಾಯತ ಧರ್ಮವನ್ನು ಮರೆತು ಹಿಂದೂ ಎಂದು ಸಮೀಕ್ಷೆಯಲ್ಲಿ ಬರೆಸುವಂತೆ ಹೇಳುತ್ತಿದ್ದಾರೆ. ಟ್ರಸ್ಟ್​ನ ಪ್ರದಾನ ಕಾರ್ಯದರ್ಶಿಗಳಾದ ನೀಲಕಂಠ ಅಸೂಟಿಯವರು ಹಾಗೂ ಅನೇಕ ಧರ್ಮದರ್ಶಿಗಳು ಒಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರು ಇನ್ನೂ ಮುಂದೆ ಈ ಪೀಠಕ್ಕೆ ಬರುವಂತಿಲ್ಲ, ಅವರು ಜಗದ್ಗುರುಗಳು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here