ವಿಜಯಸಾಕ್ಷಿ ಸುದ್ದಿ, ಮೈಸೂರು: ಮೈಸೂರು ದಸರಾ, ನಾಡಿನ ನಾಡಿ, ಸಂಸ್ಕೃತಿಯ ಉತ್ಸವವಾಗಿದ್ದು, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳವಾಗಿದೆ ಎಂದು ಸಾಹಿತಿ ಹಾಗೂ 2025ರ ಅಂತಾರಾಷ್ಟ್ರೀಯ ಬೂಕರ್ ಬಹುಮಾನ ವಿಜೇತರಾದ ಬಾನು ಮುಷ್ತಾಕ್ ಹೇಳಿದರು.
ಅವರು ಸೋಮವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಪ್ರಾರಂಭವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ದಸರಾದ ಪವಿತ್ರ ಕ್ಷಣದಲ್ಲಿ ಚಾಮುಂಡಿ ತಾಯಯ ಕೃಪೆಯ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಘಳಿಕೆ. ದಸರಾ ಎಂದರೆ ಕೇವಲ ಹಬ್ಬವಲ್ಲ, ಇದು ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ಬಾರಿಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ ಎಂದರು.
ಮೈಸೂರು ದಸರಾ ಘೋಷಣೆ ನಮ್ಮೆಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ, ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಪರಸ್ಪರರ ನಂಬಿಕೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸಬೇಕಿದೆ. ಈ ನೆಲದ ಬಿಸಿಲು ಕೂಡ ಸೌಹಾರ್ದತೆಯಿಂದ ಕೂಡಿದೆ. ಈ ನೆಲದ ಬಿಸಿಲು ಕೂಡ ಮಾನವೀಯ ಪ್ರೀತಿಯ ಪ್ರತೀಕವಾಗಿದೆ.
ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ. ತಾಯಿ ಚಾಮುಂಡಿ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಗಳು ನಾಶವಾಗಲೆಂದು ಬಯಸುತ್ತೇನೆ ಎಂದರು.
ನಾವು ಎಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶವು ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು. ಇಂದು ಈ ಹಬ್ಬ ಮೈಸೂರಿನ ಬೀದಿಗಳಲ್ಲಿ ಮಾತ್ರವಲ್ಲ, ಇಡೀ ಜಗತ್ತಿನ ಹೃದಯಗಳಲ್ಲಿ ಬೆಳಗಲಿ ಎಂದರು.
ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ, ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎಂದು ಆಶಿಸಿದರು.
ಇತಿಹಾಸದತ್ತ ನೋಡಿದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ಅವರು ಹಂಚಿಕೊಳ್ಳುವ ಮನದ ಅರಸ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಭೇದ-ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಅವರು ನೀಡಿದ ಸಂದೇಶ, ಸಂಪತ್ತನ್ನು ಹಂಚಿದಾಗ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕತ್ತದೆ ಎಂದು ಬಾನು ಮುಷ್ತಾಕ್ ಅಭಿಪ್ರಾಯ ವ್ಯಕ್ತಪಡಿಸಿದರು.



