ಚೆನ್ನೈ:- ತಮಿಳು ನಟ ವಿಜಯ್ ನೇತೃತ್ವದ ಬೃಹತ್ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 31 ಜನ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ಜರುಗಿದೆ.
2026ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ – ರಾಜಕಾರಣಿ ವಿಜಯ್ ತಮಿಳುನಾಡು ಪ್ರವಾಸ ನಡೆಸುತ್ತಿದ್ದು, ಕರೂರ್‌ನಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ವಯಸ್ಕರೆಲ್ಲರೂ ವಿಜಯ್ ಅವರ ರಾಜಕೀಯ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಬೆಂಬಲಿಗರಾಗಿದ್ದರು. ವರದಿಗಳ ಪ್ರಕಾರ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.
ವಿಪರೀತ ಜನಸಂದಣಿ ಮತ್ತು ಬಿಸಿಲಿನ ಬೇಗೆಯಿಂದಾಗಿ ಹಲವರು ಮೂರ್ಛೆ ಹೋಗಿ ಬಿದ್ದ ಘಟನೆಗಳು ಕೂಡ ನಡೆದಿದ್ದವು. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ನೆರವಿಗಾಗಿ ಪೊಲೀಸರಿಗೆ ಮನವಿ ಮಾಡಿದರು. ಅವರು ವೇದಿಕೆಯಿಂದಲೇ ಜನರಿಗೆ ನೀರಿನ ಬಾಟಲಿಗಳನ್ನು ಎಸೆದು ಸಹಾಯ ಮಾಡಲು ತೀವ್ರ ಪ್ರಯತ್ನ ನಡೆಸಿದರು. ಆದ್ರೆ ದುರಾದೃಷ್ಟವಶಾತ್ ಹೆಚ್ಚಿನ ಜನಸಂದಣಿಯಾಗಿ ಕಾಲ್ತುಳಿತ ಸಂಭವಿಸಿದೆ. ಪರಿಣಾಮ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರಿಗೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೂರ್ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿ ಅವರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


