ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಸಮಾಜದಲ್ಲಿ ಜಾತಿ-ಜಾತಿ ಎಂದು ಬಡಿದಾಡುಕೊಳ್ಳುವ ಮೂಲಕ ನಮ್ಮತನವನ್ನು ಮರೆಯುತ್ತಿದ್ದೇವೆ. ದೇವರು ಜಾತಿಗಳನ್ನು ಸೃಷ್ಟಿಸಲಿಲ್ಲ, ಆದರೆ ಜಾತಿಗಳನ್ನು ಮನುಷ್ಯ ಸೃಷ್ಟಿ ಮಾಡಿದ್ದಾನೆ ಎಂದು ಅತ್ತಿವೇರಿ ಬಸವಧಾಮದ ಪ.ಪೂ ಬಸವೇಶ್ವರ ಮಾತಾಜೀ ನುಡಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ದೇವರ ಆವರಣದಲ್ಲಿ ಸೋಮವಾರ ಸಂಜೆ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಂದಿನ ದಿನದಲ್ಲಿ ವೃತ್ತಿಗಳ ಆಧಾರದಲ್ಲಿ ಜಾತಿಗಳು ನಿರ್ಮಾಣವಾಗಿದ್ದವು. ಆದರೆ, ಮೇಲು-ಕೀಳು ಎಂಬುದು ನಾವು ಮಾಡಿಕೊಂಡಿದ್ದು, ಜಾತಿಯ ಭೂತದಿಂದ ಅಧೋಗತಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಜನರಲ್ಲಿ ಬರುತ್ತಿಲ್ಲ. ಎಲ್ಲರೂ ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದೇವೆ. ಇಲ್ಲಿ ಜಾತಿ-ಜಾತಿಗಳ ಜಗಳ ಹಡಗಿಗೆ ಪರಸ್ಪರ ತೂತು ಕೊರೆದಂತೆ. ಅಂದರೆ ನೀರು ತುಂಬಿ ಹಡಗಿನೊಂದಿಗೇ ಮುಳುಗಿ ಹೋಗುತ್ತೇವೆ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಗಳು ಶ್ರೇಷ್ಠವಾಗಿದ್ದು, ದೇವರು, ಧರ್ಮದ ಹೆಸರಿನಲ್ಲಿ ಸಂಸ್ಕಾರ ಕೆಡುವಂತಹ ಕಾರ್ಯವಾಗುತ್ತಿರುವದು ವಿಷಾದದ ಸಂಗತಿಯಾಗಿದೆ ಎಂದರು.
ಯುವ ಮುಖಂಡ ಆನಂದ ಗಡ್ಡದೇವರಮಠ ಮಾತನಾಡಿ, ಜಾತಿ, ಮತ, ಪಂಥಗಳನ್ನು ಮೀರಿ ನಿಂತು ಇಡಿ ಜಗತ್ತಿಗೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಗಟ್ಟಿ ಸಂದೇಶ ನೀಡಿರುವ ಲಿಂ.ಜ. ವೀರಗಂಗಾಧರ ಭಗವತ್ಪಾದಂಗಳ ನುಡಿಗೆ ತಕ್ಕಂತೆ ಬಾಳುವದರ ಜೊತೆಗೆ, ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಹೋಗುವಂತೆ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ವಹಿಸಿದ್ದರು. ಗುರುನಾಥ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಬಸವೇಶ ಮಹಾಂತಶೆಟ್ಟರ, ಮಹೇಶ ಹೊಗೆಸೊಪ್ಪಿನ, ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ರಾಘವೇಂದ್ರ ಪೂಜಾರ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು. ರವಿ ಲಿಂಗಶೆಟ್ಟಿ, ಗಂಗಾಧರ ಮೆಣಸಿನಕಾಯಿ, ಬಸವರಜ ಅರಳಿ ನಿರೂಪಿಸಿದರು.



