ತುಮಕೂರು: ಹೆಣ್ಣು, ಮಣ್ಣು, ಹೊನ್ನಿಗಾಗಿ ಜಗಳ, ಸಾವು-ನೋವುಗಳು ಸಂಭವಿಸುತ್ತಲೇ ಇರುತ್ತವೆ. ಅದೇ ರೀತಿ ಆಸ್ತಿ ವಿಚಾರಕ್ಕೆ ಅಣ್ಣ ತಮ್ಮನನ್ನೇ ಕೊಂದಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬ್ಯಾಲಹಳ್ಳಿ-ಕುಪ್ಪೂರು ರಸ್ತೆಯಲ್ಲಿ ನಡೆದಿದೆ.
ಶ್ರೀನಿವಾಸ್(55) ಮೃತ ದುರ್ಧೈವಿಯಾಗಿದ್ದು, ಕೃಷ್ಣಪ್ಪ(60) ಆರೋಪಿಯಾಗಿದ್ದಾನೆ. ಬ್ಯಾಲಹಳ್ಳಿಯ ರಾಮಯ್ಯನ ಮಕ್ಕಳಾದ ಶ್ರೀನಿವಾಸ್, ಕೃಷ್ಣಪ್ಪ ನಡುವೆ ಆಸ್ತಿ ಕಲಹ ಉಂಟಾಗಿದ್ದು, ಇಂದು ಬೆಳಗ್ಗೆ ಬ್ಯಾಲಹಳ್ಳಿ-ಕುಪ್ಪೂರು ರಸ್ತೆಯ ಮಧ್ಯೆ ಇರೋ ತಮ್ಮ ತೋಟದ ಬಳಿ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿ ಕೃಷ್ಣಪ್ಪ ತನ್ನ ತಮ್ಮನಾದ ಶ್ರೀನಿವಾಸನ ಮೇಲೆ ಮಾರಕಾಸ್ರ್ತಗಳಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ಗಲಾಟೆಯಲ್ಲಿ ಅಣ್ಣ ಕೃಷ್ಣಪ್ಪನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನಾ ಸ್ಥಳಕ್ಕೆ ತುರುವೇಕೆರೆ ಪೊಲೀಸರು ಆಗಮಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನೂ ಆರೋಪಿ ಕೃಷ್ಣಪ್ಪನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದಿದ್ದಾರೆ.